

ಯಲ್ಲಾಪುರ: ಕೆರೆಗಳ ಹೂಳೆತ್ತಿ, ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಮನುವಿಕಾಸ ಸಂಸ್ಥೆಯ ಕೊಡುಗೆ ಅಪಾರವಾದದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಗಾಂಧಿ ಕುಟೀರದಲ್ಲಿ ಮನುವಿಕಾಸ ಸಂಸ್ಥೆ, ಈಡಲ್ ಗಿವ್ ಫೌಂಡೇಷನ್ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಶ್ರಮಿಕರಿಗೆ ಗುರುವಾರ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು. ಯಲ್ಲಾಪುರ, ಮುಂಡಗೋಡ ತಾಲೂಕುಗಳಲ್ಲಿ ಮನುವಿಕಾಸ ಸಂಸ್ಥೆ ದೊಡ್ಡ ಪ್ರಮಾಣದಲ್ಲಿ ಕೆರೆಗಳ ಹೂಳೆತ್ತಿದೆ ಹಾಗೂ ಶ್ರಮಿಕರಿಗೆ ಸಲಕರಣೆಗಳನ್ನು ವಿತರಿಸಿದೆ ಎಂದರು.
ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ತಾಪಂ ಸದಸ್ಯೆ ರಾಧಾ ಹೆಗಡೆ, ಇಒ ಜಗದೀಶ ಕಮ್ಮಾರ, ಪಪಂ ಅಧ್ಯಕ್ಷೆ ಸುನಂದಾ ದಾಸ್ ಇತರರಿದ್ದರು. ಸಂಸ್ಥೆಯ ಅಧ್ಯಕ್ಷ ಗಣಪತಿ ಭಟ್ಟ ಸ್ವಾಗತಿಸಿದರು. ರಾಜೇಶ್ವರಿ ಸಿದ್ದಿ ವಂದಿಸಿದರು. ಕಿರವತ್ತಿ, ಮದನೂರು, ಇಡಗುಂದಿ ಭಾಗದ ನೂರಾರು ಶ್ರಮಿಕರಿಗೆ ಸಲಕರಣೆಗಳನ್ನು ವಿತರಿಸಲಾಯಿತು.
ದೇಶಪಾಂಡೆಗೆ ಟಾಂಗ್
ಯಾವುದೇ ಕಾರಣಕ್ಕೂ ಉದ್ಯೋಗ ಖಾತ್ರಿ ಯೋಜನೆ ನಿಲ್ಲಿಸಬಾರದೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಯೋಜನೆಯ ಬಗೆಗೆ ಹಳಿಯಾಳ ಶಾಸಕರು ನನಗೆ ಎಚ್ಚರಿಕೆ, ಉಪದೇಶ ನೀಡುವ ಅಗತ್ಯವಿಲ್ಲ. ಅವರ ಕ್ಷೇತ್ರದಲ್ಲಿ ಯಾವ ರೀತಿ ಯೋಜನೆಯ ಅನುಷ್ಠಾನ ನಡೆದಿದೆ ಎಂಬ ಬಗೆಗೆ ಎಲ್ಲರಿಗೂ ಅರಿವಿದೆ. ಉದ್ಯೋಗ ಖಾತ್ರಿ ಯೋಜನೆ ಕುರಿತು ಅನವಶ್ಯಕ ಅಪಸ್ವರ ಎತ್ತುವ ಅಗತ್ಯವಿಲ್ಲ ಎಂದು ಆರ್.ವಿ. ದೇಶಪಾಂಡೆ ಅವರಿಗೆ ಹೆಬ್ಬಾರ ಟಾಂಗ್ ನೀಡಿದರು.
EndFragment