ಕೆಐಎಡಿಬಿಗೆ ಭೂಮಿ ನೀಡುವ ಪ್ರಶ್ನೆಯೇ ಇಲ್ಲ

FotoJet
Published on

ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಡಾ.ಎಂ.ಸಿ. ಸುಧಾಕರ್‌ಗೆ ಹೋರಾಟ ಸಮಿತಿ ಮನವಿ

ಶಿಡ್ಲಘಟ್ಟ : ಯಾವುದೇ ಕಾರಣಕ್ಕೂ ಫಲವತ್ತಾದ ಕೃಷಿ ಭೂಮಿಯನ್ನು ಕರ್ನಾಟಕ ಕೈಗಾರಿಕ ಪ್ರದೇಶ ಅಭಿವೃದ್ದಿ ನಿಗಮ (ಕೆಐಎಡಿಬಿ)ಕ್ಕೆ ನೀಡುವ ಪ್ರಶ್ನೆಯೆ ಇಲ್ಲ. ಕೈಗಾರಿಕೆಗಳಿಗೆ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನೂ ಕೈಬಿಡುವಂತೆ ಜಮೀನು ಸ್ವಾಧೀನ ವಿರೋಧಿ ಹೋರಾಟ ಸಮಿತಿ, ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರಿಗೆ ಮನವಿ ಸಲ್ಲಿಸಿದರು.ಬೆಂಗಳೂರಿನ ಗೃಹ ಕಚೇರಿಯಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರನ್ನು ಸೋಮವಾರ ಭೇಟಿ ಮಾಡಿದ ಜಂಗಮಕೋಟೆ ಕೆಐಎಡಿಬಿ ಉದ್ದೇಶಿತ ಕೈಗಾರಿಕೆ ಸ್ಥಾಪನೆ ಜಾಗದ ವ್ಯಾಪ್ತಿಯ ಜಮೀನುಗಳ ರೈತರು, ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ನಾವು ಕೈಗಾರಿಕೆಗಳ ವಿರೋಧಿಗಳಲ್ಲ. ಆದರೆ, ಫಲವತ್ತಾದ ನೀರಾವರಿ ವ್ಯವಸ್ಥೆಯುಳ್ಳ ಕೃಷಿ ಭೂಮಿಯಲ್ಲಿ ಕೈಗಾರಿಕೆಗಳನ್ನು ಆರಂಭಿಸುವುದು ಬೇಡ ಎಂಬುದಷ್ಟೇ ನಮ್ಮ ವಾದ. ಕೃಷಿ ಯೋಗ್ಯವಲ್ಲದ ಭೂಮಿಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿ. ಇದರಿಂದ ಉದ್ಯೋಗ ಸೃಷ್ಟಿಯಾಗಿ ಅಭಿವೃದ್ಧಿಗೆ ಪೂರಕವಾಗಲಿದೆ. ಕೂಡಲೇ ಜಮೀನು ಸ್ವಾಧೀನ ಪ್ರಕ್ರಿಯೆ ಸಂಬಂಧಿತ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು. ಯಾವುದೆ ಕಾರಣಕ್ಕೂ ಕೆಐಎಡಿಬಿಗೆ ಜಮೀನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಎಲ್ಲ ಹೋರಾಟಕ್ಕೂ ಸಿದ್ಧರಾಗಿದ್ದು, ಪ್ರಾಣ ಬಿಟ್ಟೇವೇ ಹೊರತು ಜಮೀನು ಬಿಡುವುದಿಲ್ಲ ಎಂದು ಹೋರಾಟಗಾರರ ನಿಲುವನ್ನು ಸ್ಪಷ್ಟಪಡಿಸಿದರು. ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಪದಾಧಿಕಾರಿಗಳಾದ ಬಿ.ನಾರಾಯಣಸ್ವಾಮಿ, ಹಿರೇಬಲ್ಲ ಕೃಷ್ಣಪ್ಪ, ಹಿತ್ತಲಹಳ್ಳಿ ರಮೇಶ್, ಅಜಿತ್‌ಕುಮಾರ್, ಮತ್ತಿತರರು ಹಾಜರಿದ್ದರು.

ಸಭೆ ಕರೆದು ತೀರ್ಮಾನ : ಸಮಿತಿ ಮನವಿ ಆಲಿಸಿದ ಸಚಿವ ಡಾ.ಎಂ.ಸಿ.ಸುಧಾಕರ್, ಈ ತಿಂಗಳ 12 ಅಥವಾ 19ರಂದು ಈ ಭಾಗದ ಎಲ್ಲ ರೈತರ ಸಭೆ ಕರೆದು, ಅಧಿಕಾರಿಗಳನ್ನು ಸಭೆಗೆ ಬರುವಂತೆ ತಿಳಿಸುತ್ತೇನೆ. ಸಭೆಯಲ್ಲಿ ರೈತರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಮುಂದಿನ ತೀರ್ಮಾನ ಕೈಗೊಳ್ಳೋಣ ಎಂದು ಭರವಸೆ ನೀಡಿದರು.

ಜಮೀನು ಮಾರಾಟಕ್ಕಿಲ್ಲ ಅಡ್ಡಿ

ಕೆಐಎಡಿಬಿಯು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ವ್ಯಾಪ್ತಿಯಲ್ಲಿ ಜಮೀನು, ರಸ್ತೆಗಳ ಸರ್ವೇ ಕಾರ್ಯಕ್ಕೆ ಈಗಾಗಲೇ ಟೆಂಡರ್ ಕರೆದಿದ್ದು, ಇದನ್ನು ಕೂಡಲೇ ರದ್ದುಪಡಿಸುವುದಾಗಿ ಕೆಐಎಡಿಬಿ ಆಯುಕ್ತ ಮಹೇಶ್ ಭರವಸೆ ನೀಡಿದ್ದಾರೆ. ಜತೆಗೆ 13 ಗ್ರಾಮಗಳ 2823 ಎಕರೆ ಜಮೀನು ಮಾರಾಟ, ವಿಭಾಗ ಸೇರಿ ಯಾವುದೇ ಚಟುವಟಿಕೆಗಳನ್ನು ನಡೆಸಲು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಮಸ್ಯೆ ಇದ್ದು, ಕೂಡಲೇ ಇದನ್ನು ತೆರವುಗೊಳಿಸಲು ಪತ್ರ ಬರೆಯಲಾಗುವುದು. ಬಾಗೇಪಲ್ಲಿಯಲ್ಲೂ ಈ ರೀತಿ ಸಮಸ್ಯೆಯಿದ್ದು ಈಗ ಸರಿಪಡಿಸಲಾಗಿದೆ. ಸೋಮವಾರ ಪತ್ರ ವ್ಯವಹಾರ ನಡೆಸಿ ಅದರ ಒಂದು ಪ್ರತಿಯನ್ನು ನಿಮಗೆ ನೀಡಲಾಗುವುದು. ಎಂದಿನಂತೆ ಜಮೀನು ಮಾರಾಟ, ವಿಭಾಗ, ಅಡವಿಟ್ಟು ಸಾಲ ಪಡೆಯುವಂತಹ ಚಟುವಟಿಕೆಗಳಿಗೆ ಯಾವುದೇ ಅಡೆತಡೆ ಇಲ್ಲದಂತೆ ಸರಿಪಡಿಸಲು ಸಂಬಂಧಪಟ್ಟ ಸೂಚಿಸಲಾಗುವುದು ಎಂದೂ ತಿಳಿಸಿದ್ದಾರೆ ಎಂದು ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net