ಬಿ ಖಾತಾ ಆಂದೋಲನಕ್ಕೆ ಸಾರ್ವಜನಿಕರಿಂದ ಸ್ಫಂಧನೆ ಇಲ್ಲ

27-06-rama-CMC
Published on

ರಾಮನಗರ: ನಗರದಲ್ಲಿ ಬಿ - ಖಾತೆ ಅಭಿಯಾನಕ್ಕೆ ಸಾರ್ವಜನಿಕರಿಂದ ಸೂಕ್ತ ಸ್ಪಂಧನೆ ವ್ಯಕ್ತವಾಗುತ್ತಿಲ್ಲ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಬೇಸರ ವ್ಯಕ್ತಪಡಿಸಿದರು.

ನಗರಸಭೆ ಕಚೇರಿಯಲ್ಲಿ ಇ-ಖಾತೆ ಅರ್ಜಿದಾರರಿಗೆ ಇ ಖಾತೆಗಳನ್ನು ವಿತರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ನಗರದಲ್ಲಿ ಬಿ-ಖಾತೆ ಅಭಿಯಾನದಡಿ ನೋಂದಣಿಯಾಗಲು ಐದು ಸಾವಿರ ಅನಧಿಕೃತ ಆಸ್ತಿಗಳಿವೆ. ಅಭಿಯಾನ ಆರಂಭಗೊ0ಡ ನಂತರ ನಾಲ್ಕು ಸಾವಿರ ಅರ್ಜಿಗಳನ್ನು ಜನರು ಪಡೆದಿದ್ದಾರೆ. ಈ ಬಗ್ಗೆ ನಗರಸಭೆಯಿಂದಲೂ ವ್ಯಾಪಕ ಪ್ರಚಾರ ಮಾಡಲಾಗಿದೆ. ಆದರೆ ಕೇವಲ 1,300 ಅರ್ಜಿಗಳು ಮಾತ್ರ ವಾಪಸ್ ಬಂದಿವೆ. ಇವುಗಳಲ್ಲಿ 970 ವಿಲೇವಾರಿ ಮಾಡಲಾಗಿದೆ. ಆಗಸ್ಟ್ 10ರವರೆಗೆ ಅಭಿಯಾನ ನಡೆಯಲಿದೆ ಎಂದು ಶೇಷಾದ್ರಿ ಹೇಳಿದರು.

ಮತ್ತೊಂದೆಡೆ ತಾಂತ್ರಿಕ ಅಡಚಣೆಗಳ ನಡುವೆಯೂ ನಗರಸಭೆಯು ಇ-ಖಾತಾ ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದೆ. ಅಭಿಯಾನದಡಿ ಇದುವರೆಗೆ ಹನ್ನೆರಡು ಬಾರಿ ಅರ್ಜಿದಾರರನ್ನು ನಗರಸಭೆಗೆ ಕರೆಯಿಸಿ ಇ-ಖಾತೆಗಳನ್ನು ವಿತರಿಸಲಾಗುತ್ತಿದೆ ಎಂದು ಇದೇ ವೇಳೆ ಶೇಷಾದ್ರಿ ಹೇಳಿದರು. ಅರ್ಜಿದಾರರನ್ನು ಕಚೇರಿಗೆ ಅಲೆದಾಡಿಸದೆ, ಪ್ರಕ್ರಿಯೆ ಸಕಾಲದಲ್ಲಿ ಇ-ಖಾತೆ ನೀಡುವ ಮಾತಿಗೆ ಬದ್ದವಾಗಿ ನಗರಸಭೆ ಕೆಲಸ ಮಾಡುತ್ತಿದೆ ಎಂದರು.

ಚಾಮು0ಡೇಶ್ವರಿ ಮತ್ತು ಬನ್ನಿ ಮಹಾಂಕಾಳಿ ಕರಗದ ಹಿನ್ನೆಲೆಯಲ್ಲಿ ಅಗತ್ಯ ತಯಾರಿಗಾಗಿ ನಗರಸಭೆಯು ತುರ್ತು ಸಾಮಾನ್ಯ ಸಭೆ ನಡೆಸಿದೆ. ರಸ್ತೆ ದುರಸ್ತಿ ಸೇರಿದಂತೆ ಅಗತ್ಯ ಕೆಲಸಗಳನ್ನು ತ್ವರಿತವಾಗಿ ಮುಗಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕರಗ ಬರುವ ರಸ್ತೆಗಳು ಸೇರಿದಂತೆ ಎಲ್ಲಾ ರಸ್ತೆಗಳ ರಸ್ತೆ ಗುಂಡಿಗಳಿಗೆ ವೆಟ್‌ಮಿಕ್ಸ್ ಹಾಕುವ ಕೆಲಸ ನಡೆಯುತ್ತಿದೆ. ಕೆಲವೆಡೆ ಕಾಂಕ್ರೀಟ್ ರಸ್ತೆ ನಿರ್ಮಾಣ ಸಾಗುತ್ತಿದೆ. ಕರಗ ಸರಾಗವಾಗಿ ನಡೆಯಲು ಸಮರೋಪಾದಿಯಲ್ಲಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಕ್ಷಮೆ ಯಾಚಿಸುವೆ

ಆರಂಭದಲ್ಲಿ ತ್ಯಾಜ್ಯ ಸಂಗ್ರಹ, ವಿಲೇವಾರಿ, ಸ್ವಚ್ಚತಾ ಕೆಲಸಗಳು, ಕಸದ ಬ್ಲಾö್ಯಕ್ ಸ್ಪಾಟ್ ನಿವಾರಣೆಯಂತಹ ಸುಧಾರಣಾ ಕ್ರಮಗಳನ್ನು ಕೈಗೊಂಡು ಸ್ವಚ್ಛ ರಾಮನಗರ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಇತ್ತೀಚೆಗೆ ತ್ಯಾಜ್ಯ ವಿಲೇವಾರಿ ಜಾಗದ ಸಮಸ್ಯೆಯಿಂದಾಗಿ, ಕಸ ಸಂಗ್ರಹದಲ್ಲಿ ಸಮಸ್ಯೆಯಾಗಿದೆ. ಇದಕ್ಕೆ ನಾಗರಿಕರ ಕ್ಷಮೆ ಕೋರುವೆ. ತ್ಯಾಜ್ಯ ಸಮಸ್ಯೆಗೆ ಶೀಘ್ರ ಪರಿಹಾರ ಸಿಗಲಿದೆ ಶೇಷಾದ್ರಿ ಹೇಳಿದರು.

ಈ ವೇಳೆ ನಗರಸಭೆ ಉಪಾಧ್ಯಕ್ಷೆ ಆಯೀಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಪೌರಾಯುಕ್ತ ಡಾ. ಜಯಣ್ಣ, ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net