ರೈತರನ್ನು ಒಕ್ಕಲೆಬ್ಬಿಸುವ ಯತ್ನ ಸಲ್ಲದು

ರೈತರನ್ನು ಒಕ್ಕಲೆಬ್ಬಿಸುವ ಯತ್ನ ಸಲ್ಲದು
Published on

ಹಾಸನ: ಸೆಕ್ಷನ್ 4ರ ಅಡಿ ಅರಣ್ಯ ಭೂಮಿ ಎಂದು ಜನರನ್ನು ಒಕ್ಕಲೆಬ್ಬಿಸಲು ಮುಂದಾಗಿರುವ ಅರಣ್ಯ ಇಲಾಖೆ ಆ ಜಾಗ ಯಾರಿಗೆ ಸೇರಿದೆ ಎಂಬುದರ ಕುರಿತು ತಿಳಿವಳಿಕೆ ಹೊಂದದೆ ಇರುವುದು ಏಕೆ ಎಂದು ಮಾಜಿ ಸಚಿವ ಬಿ. ಶಿವರಾಮ್ ಪ್ರಶ್ನಿಸಿದರು.

ಅರಣ್ಯ ಜಾಗ ರಕ್ಷಣೆ ಮತ್ತು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಏಕಾಏಕಿ ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಿ ಹತ್ತಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರನ್ನು ಒಕ್ಕಲೆಬ್ಬಿಸಲು ಯತ್ನಿಸುವುದು ಯಾವ ನ್ಯಾಯ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

1928ರಲ್ಲಿ ಮೈಸೂರು ಮಹಾರಾಜರು ಗೋಮಾಳವೆಂದು ಘೋಷಿಸಿದ ಜಾಗವು ಈಗ ಮೀಸಲು ಅರಣ್ಯ ಎನ್ನಲಾಗುತ್ತಿದೆ. ಅದು ಅರಣ್ಯ ಜಾಗವಾಗಿದ್ದರೆ ಇಂದಿಗೂ ಕಂದಾಯ ಜಾಗವಾಗಿಯೇ ಇದೆ. ರೈತರಿಗೆ ಹಕ್ಕುಪತ್ರ, ಪಹಣಿ ಸಹ ನೀಡಲಾಗಿದೆ. ಅದು ಅರಣ್ಯವಾಗಿದ್ದರೆ ಪಹಣಿ ಏಕೆ ಬರುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಗಮನಿಸಬೇಕಿತ್ತಲ್ಲವೇ. ಶತಮಾನಗಳ ಸಮಸ್ಯೆಯನ್ನು ಜೀವಂತವಾಗಿಟ್ಟಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವುದಿಲ್ಲವೆಂದರು.

ಜಿಲ್ಲೆಯಲ್ಲಿ ಈ ರೀತಿ 36 ಪ್ರದೇಶವಿದೆ. ಅರಸೀಕೆರೆ ತಾಲೂಕಿನ ಅತ್ತಿಗುಡ್ಡ ಕಾವಲ್‌ನಲ್ಲಿ 300ಕ್ಕೂ ಹೆಚ್ಚು ಹಾಗು ನೀಲಗಿರಿ ಕಾವಲಿನಲ್ಲಿ 1600ಕ್ಕೂ ಹೆಚ್ಚು ರೈತರು ಭೂಮಿ ಅವಲಂಬಿಸಿದ್ದಾರೆ. ಜಿಲ್ಲಾದ್ಯಂತ ಸುಮಾರು 50 ಸಾವಿರ ಎಕರೆ ಪ್ರದೇಶ ಈಗ ಮೀಸಲು ಪ್ರದೇಶವೆಂದು ಅಂದಾಜಿಸಲಾಗಿದೆ. ಹಾಗಾದರೆ ಇದೆಲ್ಲಾ ಅರಣ್ಯ ಭೂಮಿಯಾಗಿದ್ದರೆ ಇಷ್ಟು ವರ್ಷ ಸುಮನಿದ್ದುದು ಏಕೆ? ಈಗ ರೈತರ ವಿರುದ್ಧ ಹಗೆತನ ಸಾಧಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ಸಭೆಗಳಲ್ಲಿ ಪ್ರಸ್ತಾಪವಿಲ್ಲ ಏಕೆ ? : ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಸದನದಲ್ಲಿ ಯಾವ ಶಾಸಕರು ಮಾತನಾಡುವುದಿಲ್ಲ. ಕೆಡಿಪಿ ಸಭೆಯಲ್ಲೂ ಚಕಾರ ಎತ್ತುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾದರೂ ಗಮನ ಹರಿಸಬೇಕೆಲ್ಲವೇ. ಸಮಸ್ಯೆ ಜೀವಂತವಾಗಿರುವುದೇ ಜನಪ್ರತಿನಿಧಿಗಳ ಉದ್ದೇಶವಾಗಿದೆ. ಮಂತ್ರಿ ಸ್ಥಾನ ಬೇಕೆಂದು ಭಾಷಣ ಮಾಡುವವರು ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದರು.

ಡಿಎಫ್‌ಒಗೆ ಮನವಿ ಸಲ್ಲಿಕೆ: ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಲು ಇರುವ ಮಾನದಂಡ, ಕಂದಾಯ ಜಮೀನಿನ ಮೇಲೆ ನಡೆಯುತ್ತಿರುವ ಪ್ರಹಾರದ ಕುರಿತು ಸಮಗ್ರವಾಗಿ ಚರ್ಚಿಸಿ ಅತ್ತಿಗುಡ್ಡ ಹಾಗೂ ನೀಲಗಿರಿ ಕಾವಲು ಗ್ರಾಮಸ್ಥರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದೇನೆ. ಒಂದು ತಿಂಗಳ ಒಳಗೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಪ್ರಾರಂಭಿಸುತ್ತೇನೆಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net