ಕೆಂಜಲದಲ್ಲಿಲ್ಲ ಬಸ್ ತಂಗುದಾಣ

Kdb_Bus-Stop
Published on

ವಿಜಯವಾಣಿ ಸುದ್ದಿಜಾಲ ಕಡಬ

ಕಡಬ ತಾಲೂಕು ಕಾಡಂಚಿನ ಕೊಂಬಾರು ಗ್ರಾ.ಪಂ.ವ್ಯಾಪ್ತಿಯ ಕೆಂಜಲ ಎಂಬಲ್ಲಿ ಸುಸಜ್ಜಿತ ಬಸ್ಸು ತಂಗುದಾಣ ನಿರ್ಮಿಸಬೇಕೆಂಬ ಬೇಡಿಕೆ ಇನ್ನೂ ಇಡೇರಿಲ್ಲ. ಬಸ್ ತಂಗುದಾಣವಿಲ್ಲದೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಸ್ತೆಯಂಚಿನಲ್ಲಿ ವಾಹನಕ್ಕಾಗಿ ಕಾಯುವ ಸ್ಥಿತಿಯಿದೆ. ತಂಗುದಾಣ ನಿರ್ಮಿಸಲು ಸಂಬಂಧಪಟ್ಟವರಿಗೆ ನೀಡಿರುವ ಮನವಿಗಳಿಗೆ ಯಾವುದೇ ಸ್ಪಂದನೆ ದೊರೆತಿಲ್ಲ.

ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಂಜಲ ಎಂಬಲ್ಲಿಂದ ದಿನನಿತ್ಯ ನೂರಾರು ವಿದ್ಯಾರ್ಥಿಗಳು ಸುಬ್ರಹ್ಮಣ್ಯ, ಬಿಳಿನೆಲೆ, ಕಡಬ ಮುಂತಾದೆಡೆಗೆ ಶಾಲಾ ಕಾಲೇಜುಗಳಿಗೆ ಪ್ರಯಾಣಿಸುತ್ತಾರೆ. ಅದರ ಜೊತೆಗೆ ಪರಿಸರದ ಕೃಷಿಕರು, ಸಾರ್ವಜನಿಕರು ಕೆಂಜಲದಲ್ಲಿ ವಿವಿದ ಪ್ರದೇಶಗಳಿಗೆ ಸಂಚರಿಸಲು ಬಸ್ ಹಿಡಿಯಬೇಕಿದೆ. ಆದರೆ ಇಲ್ಲಿ ವ್ಯವಸ್ಥಿತವಾದ ಬಸ್ ತಂಗುದಾಣವಿಲ್ಲ. ಬಿಸಿಲು, ಮಳೆಗೆ ಕೊಡೆ ಹಿಡಿದು ರಸ್ತೆ ಬದಿಯಲ್ಲಿ ಬಸ್‌ಗೆ ಕಾಯಬೇಕಾದ ಪರಿಸ್ಥಿತಿ ಇದೆ.

ಹಲವು ವರ್ಷದ ಹಿಂದೆ ಈ ಜಾಗದಲ್ಲಿ ಸ್ಥಳೀಯ ಕೆಲವರು ಸೇರಿಕೊಂಡು ಸ್ವಂತ ಖರ್ಚಿನಲ್ಲಿ ಸಿಮೆಂಟ್ ಶೀಟ್ ಹಾಕಿ ನಿರ್ಮಿಸಿದ್ದ ಕಿರಿದಾದ ಬಸ್ ತಂಗುದಾಣವೇ ಇಷ್ಟೊಂದು ಪ್ರಯಾಣಿಕರಿಗೆ ಇಂದಿಗೂ ಆಶ್ರಯ ನೀಡುತ್ತಿದೆ. ಅದು ಕೂಡ ಬಹುತೇಕ ಶಿಥಿಲಗೊಂಡಿದೆ. ಸಂಬಂಧಪಟ್ಟವರು ಇಲ್ಲಿ ವ್ಯವಸ್ಥಿತವಾದ ಬಸ್ ತಂಗುದಾಣ ನಿರ್ಮಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಕೆಂಜಲದಲ್ಲಿ ಬಸ್ ತಂಗುದಾಣ ನಿರ್ಮಿಸಲು ಉದ್ದೇಶಿಸಿರುವ ಜಮೀನು ಅರಣ್ಯ ಇಲಾಖೆಗೆ ಸೇರಿರುವುದರಿಂದ ನಮಗೆ ಸರ್ಕಾರಿ ಅನುದಾನ ಬಳಸಲು ತೊಡಕಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ಸಂಘ-ಸಂಸ್ಥೆಗಳ ನೆರವಿನಿಂದ ಬಸ್ ತಂಗುದಾಣ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ. ರಾಘವೇಂದ್ರ ಗೌಡ, ಪಿಡಿಒ, ಕೊಂಬಾರು ಗ್ರಾ.ಪಂ.

ರಾಘವೇಂದ್ರ ಗೌಡ, ಪಿಡಿಒ, ಕೊಂಬಾರು ಗ್ರಾ.ಪಂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net