

ವಿಜಯವಾಣಿ ಸುದ್ದಿಜಾಲ ಉಪ್ಪಳ
ಬಹು ಊರುಗಳನ್ನು ಸಂಪರ್ಕಿಸುವ ದೇರಂಬಳ ಕಾಲುಸೇತುವೆ ಕುಸಿದು ಬಿದ್ದಿದ್ದು, ಮರುನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳದಿರುವುದರಿಂದ ಸ್ಥಳೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಂಗಲ್ಪಾಡಿ, ಮೀಂಜ ಪಂಚಾಯಿತಿ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಈಗ ಸಂಚಾರ ದುಸ್ತರವಾಗಿದೆ. ಹತ್ತು ಕಿ.ಮೀ ಅಧಿಕ ಸುತ್ತು ಬಳಸಿ ಸಂಚರಿಸಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ.
ದೇರಂಬಳ, ಚಿಗುರುಪಾದೆ, ಬುಡ್ರಿಯ, ಕಲ್ಲಗದ್ದೆ, ತೊಟ್ಟೆತ್ತೋಡಿ, ಬೇಕೂರು, ಪೈವಳಿಕೆ, ಜೋಡುಕಲ್ಲು, ಮಡಂದೂರು ಮೊದಲಾದ ಪ್ರದೇಶಗಳ ಜನರಿಗೆ ಅತ್ತಿತ್ತ ಸಂಚರಿಸಲು ಸಂಪರ್ಕ ಸೇತುವೆ ಇದಾಗಿತ್ತು. ಮುರಿದು ಬಿದ್ದ ಸೇತುವೆಯನ್ನು ಮರು ನಿರ್ಮಾಣ ಮಾಡಿಕೊಡಬೇಕೆಂದು ಊರವರ ಬೇಡಿಕೆ ಮಾತ್ರ ಕನಸಾಗಿಯೇ ಉಳಿದಿದೆ.
ದೇರಂಬಳ ಹೊಳೆಗೆ ಅಡ್ಡವಾಗಿ ನಿರ್ಮಿಸಿದ್ದ ಸೇತುವೆ ಕುಸಿದು ವರ್ಷಗಳು ಸಂದರೂ ಆಡಳಿತಾಧಿಕಾರಿಗಳು ಪರಿಸ್ಥಿತಿಯನ್ನು ವೀಕ್ಷಿಸಿದ್ದಾರೆ. ವಿಪರ್ಯಾಸವೆಂದರೆ ಇದುವರೆಗೂ ಯಾವುದೇ ಕ್ರಮ ಕಾರ್ಯರೂಪಕ್ಕೆ ಬರಲಿಲ್ಲ ಎಂಬ ಅಸಮಾಧಾನದ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ
ಶಾಲಾ ಕಾಲೇಜು ವಿದ್ಯಾರ್ಥಿಗಳು, ದಿನನಿತ್ಯ ವಿವಿಧ ಕೆಲಸಗಳಿಗೆ ತೆರಳುವವರಿಗೆ ಈ ಸೇತುವೆ ಸುಗಮ ಸಂಚಾರದ ಕೊಂಡಿಯಾಗಿತ್ತು. ಆದರೆ ಸೇತುವೆ ಮುರಿದು ಸಂಕಷ್ಟ ಎದುರಾಗಿದೆ. ಊರಿನ ಸ್ಥಳೀಯ ಯುವಕರು ಸೇರಿ ತಾತ್ಕಾಲಿಕ ಪರಿಹಾರಕ್ಕಾಗಿ ಕಳೆದ ಸಲ ಅಡಕೆ ಮರದ ಪಾಲ ನಿರ್ಮಿಸಿದ್ದರು. ಆದರೆ ಅದು ಇತ್ತೀಚೆಗೆ ಸುರಿದ ಭಾರಿ ಮಳೆಗೆ ನದಿ ನೀರಿನ ರಭಸಕ್ಕೆ ಕೊಚ್ಚಿ ನಾಮಾವಶೇಷವಾಗಿದೆ. ತಾತ್ಕಾಲಿಕ ಮರದ ಸಂಕವನ್ನು ನಿರ್ಮಾಣ ಮಾಡಲು ಸಾಧ್ಯವಾಗದ ರೀತಿ ಕಾಂಕ್ರೀಟ್ ಪಿಲ್ಲರ್‌ಗಳು ಬಾಗಿಕೊಂಡಿದ್ದು, ಶಾಶ್ವತ ಸೇತುವೆ ನಿರ್ಮಾಣಕ್ಕಾಗಿ ಸ್ಥಳೀಯರು ಹಲವು ಬಾರಿ ಒತ್ತಾಯಿಸಿರುವರು ಅಧಿಕಾರಿಗಳು ಮಾತ್ರ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಅವಲತ್ತುಕೊಂಡಿದ್ದಾರೆ.
ಬಸ್‌ಗಳು ಓಡಾಡದ ಪ್ರದೇಶಗಳಿಗೆ ಸಹಕಾರಿಯಾಗಿದ್ದ ದೇರಂಬಳ ಸೇತುವೆ ಮುರಿದು ಬಿದ್ದು ವರ್ಷಗಳಾದರೂ ಜನರ ಬೇಡಿಕೆಗೆ ಯಾವುದೇ ಸ್ಪಂದನೆಗಳು ದೊರೆತಿಲ್ಲ. ಯುವಕರು ಸೇರಿ ನಿರ್ಮಿಸಿದ ತಾತ್ಕಾಲಿಕ ಸಂಕವೂ ಇದೀಗ ಕೊಚ್ಚಿ ಹೋಗಿದ್ದು, ಶಾಶ್ವತ ಸೇತುವೆ ನಿರ್ಮಾಣವೊಂದೇ ಈ ಸಮಸ್ಯೆ ಪರಿಹಾರಕ್ಕಿರುವ ಮಾರ್ಗ. ಸಂಬಂಧಪಟ್ಟ ಅಧಿಕಾರಿಗಳು ಊರಿನ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ಲೋಕೇಶ್ ನೋಂಡ ಬಿಜೆಪಿ ಮಂಡಲ ಉಪಾಧ್ಯಕ್ಷ