ಗ್ರಾಪಂಗಳಲ್ಲಿ ಹೆಚ್ಚಿದೆ ಅಂಧಾದರ್ಬಾರ್, ಕರ್ತವ್ಯಕ್ಕೆ ಹಾಜರಾಗದೇ ವೇತನ ಪಾವತಿ, ಕಾರಣ ಕೇಳಿದರೆ ಕುಂಟು ನೆಪ, ಹಳಿ ತಪ್ಪಿದ ಪಂಚಾಯತ್ ಆಡಳಿತ ವ್ಯವಸ್ಥೆ

DHULAKHED GRAMA PANCHAYAT
ಚಡಚಣ ತಾಲೂಕಿನ ಧೂಳಖೇಡ ಗ್ರಾಮ ಪಂಚಾಯಿತಿ.
Published on

ವಿಜಯಪುರ: ಅಧಿಕಾರ ವಿಕೇಂದ್ರಿಕರಣದ ಮೂಲಕ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ರೂಪುಗೊಂಡ ಪಂಚಾಯತ್ ರಾಜ್ ವ್ಯವಸ್ಥೆ ಸಂಪೂರ್ಣ ಹಳ್ಳ ಹಿಡಿಯುತ್ತಿದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಮಾವಾಸೆಗೊಮ್ಮೆ, ಹುಣ್ಣಿಮೆಗೊಮ್ಮೆ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.

ಆಡಳಿತ ಸುವ್ಯವಸ್ಥೆ ದೃಷ್ಠಿಯಿಂದ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಯಲ್ಲಿದ್ದರೂ ಕುಂಟು ನೆಪ ಹೇಳಿ ಕರ್ತವ್ಯಕ್ಕೆ ಗೈರಾಗುತ್ತಿದ್ದಾರೆ. ಆದರೂ ವೇತನ ಮಾತ್ರ ತಪ್ಪದೇ ಪಾವತಿಯಾಗುತ್ತಿದೆ. ಇಷ್ಟೆಲ್ಲಾ ಅವಾಂತರಗಳಿದ್ದರೂ ಕಾರಣ ಕೇಳಿ ನೋಟಿಸ್ ನೀಡುವುದು ಬಿಟ್ಟರೆ ಹಿರಿಯ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾದ ಉದಾಹರಣೆಗಳಿಲ್ಲ.

ಚಡಚಣ ತಾಲೂಕಿನ ಧೂಳಖೇಡ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಕಾರ್ಯದರ್ಶಿ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗಿಲ್ಲದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಸಂಬಂಧಿಸಿದ ಅಧಿಕಾರಿಗಳಿಗೆ ದಾಖಲೆ ಸಮೇತ ದೂರು ನೀಡಿದ್ದಾರೆ. ಮೇಲಧಿಕಾರಿಗಳು ಸಹ ಕಾರಣ ಕೇಳಿ ನೊಟೀಸ್ ಜಾರಿ ಮಾಡಿದ್ದಾರೆ. ವಿಶೇಷವೆಂದರೆ ಆರೋಪಿತ ಅಧಿಕಾರಿಗಳು ತಪ್ಪೊಪ್ಪಿಕೊಂಡರೂ ಈವರೆಗೆ ಕ್ರಮವಾಗಿಲ್ಲವೆಂಬುದು ದೂರುದಾರರ ಅಂಬೋಣ.

ಪಂಚತಂತ್ರ -2.0 ತಂತ್ರಾಂಶದಲ್ಲಿ ತಪ್ಪದೇ ಹಾಜರಾತಿ ಮಾಡಬೇಕೆಂದು ಪಿಡಿಒ ಮತ್ತು ಕಾರ್ಯದರ್ಶಿಗಳಿಗೆ ಆದೇಶವಿದೆ. ಆದರೆ, ಧೂಳಖೇಡ ಗ್ರಾಮ ಪಂಚಾಯಿತಿ ಪಿಡಿಒ ಲಾಲಸಾಹೇಬ ನದಾಫ್ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದೇ ಹಾಜರಾತಿ ಸರಿಯಾಗಿಲ್ಲಿದಿದ್ದರೂ ವೇತನ ಪಡೆದಿರುವ ಬಗ್ಗೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತ ಚಂದ್ರಕಾಂತ ನಗರೆ ಜಿಪಂ ಸಿಇಒಗೆ ದೂರು ನೀಡಿದ್ದಾರೆ. ತಪ್ಪಿತಸ್ಥರ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದೇ ಹೋದರೆ ಹೋರಾಟ ರೂಪಿಸುವ ಎಚ್ಚರಿಕೆ ನೀಡಿದ್ದಾರೆ. ಆದರೆ, ಈವರೆಗೆ ಕ್ರಮವಾದ ಬಗ್ಗೆ ಮಾಹಿತಿ ನೀಡಿಲ್ಲ.

ಈ ಸಮಸ್ಯೆ ಜಿಲ್ಲಾದ್ಯಂತ ವ್ಯಾಪಕವಾಗಿದ್ದು, ಪಿಡಿಒಗಳು ಸಮರ್ಪಕವಾಗಿ ಪಂಚಾಯಿತಿಗಳಿಗೆ ಭೇಟಿ ನೀಡುತ್ತಿಲ್ಲ ಮತ್ತು ಇ-ಹಾಜರಾತಿಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುತ್ತಿಲ್ಲವೆಂಬ ದೂರುಗಳಿದ್ದು, ಸಿಇಒ ರಿಷಿ ಆನಂದ ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net