

ಗುಡಿಬಂಡೆ: ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಿಂದ ವಂಚಿತರಾಗುತ್ತಿದ್ದರೆ, ಮತ್ತೊಂದೆಡೆ ದೈಹಿಕ ಶಿಕ್ಷಣ ಶಿಕ್ಷಕರನ್ನು ಆಯ್ಕೆ ಮಾಡದೆ ದೈಹಿಕ ಶಿಕ್ಷಣ ಪದವೀಧರರ ವಯೋಮಿತಿ ಮೀರುತ್ತಿದ್ದು, ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ.
ಹೌದು.. ತಾಲೂಕಿನಲ್ಲಿರುವ 12 ಪ್ರೌಢಶಾಲೆಗಳ ಪೈಕಿ 7 ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿದ್ದು, ಉಳಿದ 6 ಶಾಲೆಗಳಲ್ಲಿ ಹಲವು ವರ್ಷಗಳಿಂದ ಹುದ್ದೆ ಖಾಲಿಯಿವೆ. ತಾಲೂಕಿನಲ್ಲಿರುವ 29 ಹಿರಿಯ ಪ್ರಾಥಮಿಕ ಶಾಲೆಗಳ ಪೈಕಿ ಕೇವಲ ಬೀಚಗಾನಹಳ್ಳಿ ಮತ್ತು ಹಂಪಸಂದ್ರ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿದ್ದು, ಈ ಪೈಕಿ ಕಳೆದ ತಿಂಗಳು ಒಬ್ಬರು ನಿವೃತ್ತಿಯಾಗಿದ್ದು, ಈಗ ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.
ಅವೈಜ್ಞಾನಿಕ ಆದೇಶ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 6ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣದ ಪಠ್ಯ ಅವಶ್ಯಕತೆಯಿದೆ ಎಂದು ಪಠ್ಯವನ್ನು ಅಳವಡಿಸಿದ್ದಾರೆ ಹಾಗೂ ದೈಹಿಕ ಶಿಕ್ಷಣದ ಪರೀಕ್ಷೆಯೂ ಇದೆ. ಆದರೆ, ಪಠ್ಯ ಅಳವಡಿಸುವ ಸರ್ಕಾರ, ವಿಷಯ ಬೋಧನೆ ಮಾಡಲು ಶಿಕ್ಷಕರನ್ನು ನೇಮಕ ಮಾಡುತ್ತಿಲ್ಲ. ಹಾಗಾಗಿ ಮಕ್ಕಳು ಪ್ರತಿದಿನ ಪಠ್ಯಪುಸ್ತಕವನ್ನು ತಂದು ವಾಪಸ್ ತೆಗೆದುಕೊಂಡು ಹೋಗುತ್ತಿದ್ದಾರೆ. ಶಿಕ್ಷಕರೇ ಇಲ್ಲದೆ ಪಠ್ಯವನ್ನು ಅವೈಜ್ಞಾನಿಕವಾಗಿ ಅಳವಡಿಸುತ್ತಿರುವುದಾದರೂ ಏಕೆ ಎಂಬ ಪ್ರಶ್ನೆ ವಿದ್ಯಾರ್ಥಿಗಳು ಮತ್ತು ಪಾಲಕರದ್ದಾಗಿದೆ.
ವರ್ಷಗಳೇ ಕಳೆದರೂ ನೇಮಕವಿಲ್ಲ
ಕಳೆದ 2007ರಲ್ಲಿ ಪ್ರಾಥಮಿಕ ಶಾಲೆಗಳ ಶಿಕ್ಷಕರನ್ನು ಆಯ್ಕೆ ಮಾಡಿದಾಗ ದೈಹಿಕ ಶಿಕ್ಷಣ ಶಿಕ್ಷಕರನ್ನೂ ಆಯ್ಕೆ ಮಾಡಿಕೊಳ್ಳಲಾಗಿತ್ತು. ತದನಂತರ 2017ರಲ್ಲಿ ರಾಜ್ಯದಲ್ಲಿ 250 ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ನಂತರ ಅನೇಕ ನೆಪ ಹೇಳುತ್ತ ಸರ್ಕಾರ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಮೀನಮೇಷ ಎಣಿಸುತ್ತಿದೆ ಎಂದು ದೈಹಿಕ ಶಿಕ್ಷಣ ಪದವೀಧರರು ದೂರಿದ್ದಾರೆ.
ಪಠ್ಯೇತರ ಚಟುವಟಿಕೆ ಕುಂಠಿತ
ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಶಿಕ್ಷಕರು ಇಲ್ಲದ ಪರಿಣಾಮದ ಕ್ರೀಡೆ, ವ್ಯಾಯಾಮ, ಯೋಗ ಸೇರಿ ಸಾಂಸ್ಕೃತಿಕ ಚಟುವಟಿಕೆಗಳು ಕುಂಠಿತವಾಗುತ್ತಿವೆ. ಸಭೆ ಸಮಾರಂಭಗಳಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಭಾಗವಹಿಸಿ ದೈಹಿಕವಾಗಿ ಸದೃಢರಾಗಬೇಕೆಂಬ ಭಾಷಣ ಮಾಡುವ ರಾಜಕೀಯ ವ್ಯಕ್ತಿಗಳು ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯ ಬಗ್ಗೆ ಸದನದಲ್ಲಿ ಯಾಕೆ ಪ್ರಶ್ನೆ ಮಾಡುವುದಿಲ್ಲ ಎಂದು ಪಾಲಕರು ಆಕ್ರೋಶ ಹೊರಹಾಕಿದ್ದಾರೆ.
ಅತಿಥಿ ಶಿಕ್ಷಕರೂ ಇಲ್ಲ
ಭಾಷಾ ವಿಷಯಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಸರ್ಕಾರ, ದೈಹಿಕ ಶಿಕ್ಷಣದ ವಿಷಯದಲ್ಲಿ ಮಾತ್ರ ಇದನ್ನು ಪಾಲಿಸುತ್ತಿಲ್ಲ. ಹಾಗಾಗಿ ಇತರ ಶಿಕ್ಷಕರೇ ಮಕ್ಕಳಿಗೆ ದೈಹಿಕ ಶಿಕ್ಷಣದ ಬಗ್ಗೆ ಅಲ್ಪಸ್ವಲ್ಪ ಬೋಧನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಕೂಡಲೇ ದೈಹಿಕ ಶಿಕ್ಷಣ ವಿಷಯ ಬೋಧನೆಗೂ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕೆನ್ನುವ ಆಗ್ರಹ ಕೇಳಿಬಂದಿದೆ.
"ಹಿರಿಯ ಮತ್ತು ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಇರಬೇಕು ಎಂಬ ಆದೇಶವಿದೆ. ಆದರೆ, ತಾಲೂಕಿನ ಅನೇಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲದೇ ಮಕ್ಕಳು ಕ್ರೀಡೆಗಳಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಸರ್ಕಾರ ದೈಹಿಕ ಶಿಕ್ಷಣ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲವೇ ಕನಿಷ್ಠ ಪಕ್ಷ ಅತಿಥಿ ಶಿಕ್ಷಕರನ್ನಾದರೂ ನೇಮಕ ಮಾಡಬೇಕು."
ಎನ್.ಆದಿನಾರಾಯಣಸ್ವಾಮಿ
ಎಸ್‌ಎಫ್‌ಐ ಮಾಜಿ ಸದಸ್ಯ ಹಾಗೂ ಪಾಲಕ, ಬೆಣ್ಣೆಪರ್ತಿ
"ದೈಹಿಕ ಶಿಕ್ಷಣ ಪದವಿ ಮುಗಿಸಿ ವರ್ಷಗಳೇ ಕಳೆದಿವೆ. ಸರ್ಕಾರ ನೇಮಕಾತಿ ಮಾಡುತ್ತದೆ ಎಂದು ಕಾಯುತ್ತಿದ್ದೇವೆ. ಆದರೆ, ಅದು ಆಗುತ್ತಿಲ್ಲ. ರಾಜ್ಯದಲ್ಲಿ ಅನೇಕ ಮಂದಿ ದೈಹಿಕ ಶಿಕ್ಷಣ ಪದವೀಧರರಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ಅರ್ಜಿ ಸಲ್ಲಿಸುವ ವಯಸ್ಸೂ ಮೀರುತ್ತದೆ. ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು."
ಎನ್.ವಿ. ಶ್ರೀನಿವಾಸ
ದೈಹಿಕ ಶಿಕ್ಷಣ ಪದವೀಧರ, ಗುಡಿಬಂಡೆ
"ರಾಜ್ಯಾದ್ಯಂತ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ. ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲದ ಶಾಲೆಗಳಲ್ಲಿ ಅಯಾ ಶಾಲೆಗಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಇರುವ ಶಿಕ್ಷಕರೇ ಕ್ರೀಡೆಗಳನ್ನು ಮಕ್ಕಳಿಗೆ ಹೇಳಿ ಕೊಡುತ್ತಿದ್ದಾರೆ. ಸರ್ಕಾರ ಬೇಗ ದೈಹಿಕ ಶಿಕ್ಷಣ ಶಿಕ್ಷಕರನ್ನು ಆಯ್ಕೆ ಮಾಡಿಕೊಂಡರೆ ಉತ್ತಮ."
ಕೃಷ್ಣಪ್ಪ
ಬಿಇಒ, ಗುಡಿಬಂಡೆ