

* 217 ಹುದ್ದೆಗಳೇ ಖಾಲಿ
* ಇಲಾಖೆಗೆ ಎಸ್ಸೆಸ್ಸೆಲ್ಸಿ ಫಲಿತಾಂಶದದ್ದೇ ತಲೆ ಬೇನೆ
ಗಂಗಾಧರ್ ಬೈರಾಪಟ್ಟಣ ರಾಮನಗರ
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಪ್ರಮುಖ ಘಟ್ಟ. ಅದೇ ರೀತಿ ಶಿಕ್ಷಣ ಇಲಾಖೆ ಪಾಲಿಗೂ ಇದು ಬಹಳ ಮಹತ್ವದ ಹಂತ. ಆದರೆ, ಇಂತಹ ಬಹಳ ಅಮೂಲ್ಯವಾದ ಕ್ಷಣದಲ್ಲಿ ವಿದ್ಯಾರ್ಥಿಗಳನ್ನು ಗಡಿ ದಾಟಿಸಬೇಕು ಎನ್ನುವ ಶಿಕ್ಷಣ ಇಲಾಖೆ ಪ್ರಯತ್ನಕ್ಕೆ ಶಿಕ್ಷಕರ ಕೊರತೆಯೇ ದೊಡ್ಡ ತೊಡಕಾಗಿದೆ. ಜಿಲ್ಲೆಯಲ್ಲಿ ಬಹುತೇಕ ಪ್ರಮುಖ ವಿಷಯಗಳ ಶಿಕ್ಷಕ ಕೊರತೆಯೇ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದ್ದು, ಖಾಲಿ ಇರುವ ಹುದ್ದೆಗಳಿಗೆ ಅಥಿತಿ ಶಿಕ್ಷಕರೂ ಲಭ್ಯವಾಗದೆ ಇರುವುದು ದೊಡ್ಡ ತಲೆ ನೋವಾಗಿದೆ.
ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆ ಆಗಿರುವುದು ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ವಿಷಯಗಳು. ಆದರೆ, ಜಿಲ್ಲೆಯಲ್ಲಿ ಗಣಿತ ಹೊರತುಪಡಿಸಿ ವಿಜ್ಞಾನ ಮತ್ತು ಇಂಗ್ಲಿಷ್ ಶಿಕ್ಷಕ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಜಿಲ್ಲೆಯಲ್ಲಿ ಇರುವ ಸರ್ಕಾರಿ ಮತ್ತು ಅನುದಾನಿತ ಪೌಢಶಾಲೆಗಳಲ್ಲಿ ಒಟ್ಟು 217 ಶಿಕ್ಷಕರ ಕೊರತೆ ಇದ್ದು, ಇವುಗಳಲ್ಲಿ ಹೆಚ್ಚಿನ ಪಾಲು ಇಂಗ್ಲಿಷ್, ವಿಜ್ಞಾನ ಮತ್ತು ಹಿಂದಿ ಶಿಕ್ಷಕರದ್ದೇ ಆಗಿದೆ.
ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಪಾಲಿಗೆ ಹಿಂದಿ, ಇಂಗ್ಲಿಷ್ ಮತ್ತು ವಿಜ್ಞಾನ ಕಷ್ಟದ ವಿಷಯಗಳು. ಬಹುತೇಕ ವಿದ್ಯಾರ್ಥಿಗಳು ನಪಾಸಾಗುತ್ತಿರುವುದು ಇದೇ ವಿಷಯಗಳಲ್ಲಿ ಇದರಿಂದ, ರಾಜ್ಯಮಟ್ಟದಲ್ಲಿಯೂ ಜಿಲ್ಲೆಯ ಫಲಿತಾಂಶ ಕುಸಿಯಲು ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಯತ್ನವನ್ನು ಶಾಲಾ ಶಿಕ್ಷಣ ಇಲಾಖೆ ಮಾಡಿಕೊಳ್ಳುತ್ತಿದ್ದರೂ ಅರ್ಹ ಶಿಕ್ಷಕರ ಕೊರತೆಯೂ ವಿದ್ಯಾರ್ಥಿಗಳ ಕಲಿಕೆ ಮೇಲೆ ಪರಿಣಾಮ ಬೀರುತ್ತಿದೆ. ಹಲವು ಬಾರಿ ಜಾಹೀರಾತುಗಳು ಮೂಲಕ ಆಹ್ವಾನ ನೀಡಿದರು, ಅರ್ಹರು ಬರುತ್ತಿಲ್ಲ ಎನ್ನುತ್ತಿವೆ ಶಾಲಾ ಶಿಕ್ಷಣ ಇಲಾಖೆ ಮೂಲಗಳು.
ಜಿಲ್ಲೆಯಲ್ಲಿ ಹಿಂದಿ, ಇಂಗ್ಲಿಷ್ ಮತ್ತು ವಿಜ್ಞಾನ ಶಿಕ್ಷಕರ ಕೊರತೆ ಹೆಚ್ಚಾಗಿರುವ ಕಾರಣ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಕಲಿಕೆ ಹಾಗೂ ಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಬಾರದು ಎನ್ನುವ ಕಾರಣಕ್ಕೆ ಇರುವ ಶಿಕ್ಷಕರಲ್ಲಿಯೇ ಎಲ್ಲವನ್ನೂ ಪಾಠ ಪ್ರವಚನಗಳನ್ನು ಸರಿದೂಗಿಸುವ ಕೆಲಸ ಮಾಡಲಾಗುತ್ತಿದೆ. ಆದರೆ ಇದಕ್ಕೆ ಒಂದಡೆ ಶಿಕ್ಷಕರ ವಿರೋಧ ಇದ್ದರೆ ಮತ್ತೊಂದೆಡೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇರುವ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ವಾರದಲ್ಲಿ ಮೂರು ದಿನ ನಿಯೋಜನೆ ಮಾಡುತ್ತಿರುವುದು ಶಿಕ್ಷಕರ ಬೇಸರಕ್ಕೆ ಕಾರಣವಾಗಿದೆ. ಆದರೆ ಇಲಾಖೆ ಆದೇಶ ಪಾಲನೆ ನೆಪದಲ್ಲಿ ಅನಿವಾರ್ಯವಾಗಿ ಅವರು ಬೇರೆ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಮತ್ತೊಂದೆಡೆ ವಿದ್ಯಾರ್ಥಿಗಳು ಶಾಲೆ ಶಿಕ್ಷಕರು ಬೇರೊಂದು ಶಾಲೆಗೆ ಪಾಠಕ್ಕೆ ಹೋಗುವುದರಿಂದ ಸಿಲೆಬಸ್ ಮುಗಿಸುವ ಸಾಧ್ಯತೆ ಕಡಿಮೆ ಆಗಿ, ಪರೀಕ್ಷೆಯಲ್ಲಿ ಕಡಿಮೆ ಅಂಕ ಬರಲಿದೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎನ್ನುವ ಒತ್ತಡವನ್ನು ಆಯಾ ಶಾಲೆಯ ಮುಖ್ಯ ಶಿಕ್ಷಕರ ಮೇಲೆ ಹಾಕುತ್ತಿದ್ದಾರೆ.
ಪ್ರತಿ ವರ್ಷ ರಾಜ್ಯಮಟ್ಟದಲ್ಲಿ ಜಿಲ್ಲೆಯ ಸಾಧನೆಯನ್ನು ಗುರುತಿಸುವುದೇ ಜಿಲ್ಲೆ ಫಲಿತಾಂಶದ ಮೇಲೆ. 2023&24ನೇ ಸಾಲಿನಲ್ಲಿ ರಾಮನಗರ ಜಿಲ್ಲೆ 26ನೇ ಸ್ಥಾನ ಪಡೆದುಕೊಂಡಿತ್ತು. 2022-23ನೇ ಸಾಲಿನಲ್ಲಿ 21ನೇ ಸ್ಥಾನದಲ್ಲಿ ಇತ್ತು. ಇದಕ್ಕೂ ಹಿಂದೆ ಟಾಪ್ 5ರಲ್ಲಿ ರಾಮನಗರ ಜಿಲ್ಲೆ ಸ್ಥಾನ ಪಡೆದುಕೊಂಡಿತ್ತು. ಶಿಕ್ಷಕರ ಕೊರತೆ ವಿದ್ಯಾರ್ಥಿಗಳ ಕಲಿತಾ ಸಾಮರ್ಥ್ಯದ ಮೇಲೆಯೇ ಪರಿಣಾಮ ಬೀರುವ ಕಾರಣ, ಫಲಿತಾಂಶದ ಮೇಲೆಯೂ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಉತ್ತಮ ಫಲಿತಾಂಶ ಪಡೆಯಲು ಸಹಕಾರ ನೀಡಬೇಕಿದೆ.
ಜಿಲ್ಲೆಯಲ್ಲಿ ಇಟ್ಟು 107 ಸರ್ಕಾರಿ ಮತ್ತು ಅನುಧಾನಿತ ಪ್ರೌಢಾಶಾಲೆಗಳು ಇವೆ. ಆದರೆ, ಇದರಲ್ಲಿ ಅತಿ ಹೆಚ್ಚು ಶಿಕ್ಷಕರ ಕೊರತೆ ಇರುವುದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರತಿನಿಧಿಸುವ ಕನಕಪುರ ತಾಲೂಕಿನಲ್ಲಿಯೇ ಇದೆ. ಇಲ್ಲಿ ಒಟ್ಟು 84 ಪ್ರೌಢಶಾಲೆ ಶಿಕ್ಷಕರ ಹುದ್ದೆಗಳು ಕೊರತೆ ಇದೆ. ಉಳಿದಂತೆ ಮಾಗಡಿಯಲ್ಲಿ 36, ರಾಮನಗರದಲ್ಲಿ 34 ಮತ್ತು ಚನ್ನಪಟ್ಟಣದಲ್ಲಿ 63 ಶಿಕ್ಷಕರ ಕೊರತೆ ಕಾಡುತ್ತಿದೆ.
ಖಾಲಿ ಹುದ್ದೆಗಳು ಕನ್ನಡ - 54
ಇಂಗ್ಲಿಷ್ - 33
ಹಿಂದಿ - 37
ವಿಜ್ಞಾನ - 21
ಇತರೆ - 72
ಒಟ್ಟು - 217
ತಾಲೂಕುವಾರು ಶಿಕ್ಷಕರ ಕೊರತೆ
ತಾಲೂಕು ಕೊರತೆ
ಮಾಗಡಿ - 33
ರಾಮನಗರ - 34
ಚನ್ನಪಟ್ಟಣ - 66
ಕನಕಪುರ - 84
ಒಟ್ಟು - 217
ಪ್ರೌಡಶಾಲೆಗೆ ವಿಜ್ಞಾನ, ಇಂಗ್ಲಿಷ್ ಮತ್ತು ಹಿಂದಿ ಶಿಕ್ಷಕರ ಕೊರತೆ ಇರುವುದು ನಿಜ. ಇಲಾಖೆ ಮಟ್ಟದಲ್ಲಿ ಎಲ್ಲ ಪ್ರಯತ್ನಗಳನ್ನು ಕೊರತೆ ನೀಗಿಸಲು ಮಾಡುತ್ತಿದ್ದು, ಅರ್ಹ ಅಥಿತಿ ಶಿಕ್ಷಕರು ಲಭ್ಯರಾಗುತ್ತಿಲ್ಲ. ನಿಯೋಜನೆ ಮೇಲೆ ಪಾಠಗಳನ್ನು ಸರಿದೂಗಿಸುವ ಪ್ರಯತ್ನ ಮಾಡಲಾಗುತ್ತಿದೆ. > ಬಸವರಾಜೇಗೌಡ, ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ ರಾಮನಗರ
===