ಅಂತೂ ನರೇಗಾದಡಿ ಉದ್ಯೋಗ ಲಭ್ಯ

18 HANUR 3
ಪೊನ್ನಾಚಿ ಗ್ರಾಮದಲ್ಲಿ ಜನರು ನರೇಗಾ ಯೋಜನೆಯಡಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕೆಲಸದಲ್ಲಿ ತಲ್ಲೀನರಾಗಿರುವುದು. 
Published on

ಹನೂರು: ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ಜನರಿಗೆ ಗುರುವಾರ ಅಂತೂ ಇಂತೂ ಕೊನೆಗೂ ನರೇಗಾ ಯೋಜನೆಯಡಿ ಉದ್ಯೋಗ ದೊರಕಿದ್ದು, ಜನರ ಹೋರಾಟಕ್ಕೆ ಸಂದ ಪ್ರತಿಫಲವಾಗಿದೆ.

ಗ್ರಾಪಂನಲ್ಲಿ ಜನರಿಗೆ 100 ದಿನಗಳ ಕಾಲ ಉದ್ಯೋಗ ನೀಡುವ ನಿಟ್ಟಿನಲ್ಲಿ ಸರ್ಕಾರ ನರೇಗಾ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಕೆರೆ, ಕಾಲುವೆ ಅಭಿವೃದ್ಧಿ, ರಸ್ತೆ ಅಭಿವೃದ್ಧಿ ಹಾಗೂ ಇನ್ನಿತರ ಸಾಮೂಹಿಕ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಈ ದೆಸೆಯಲ್ಲಿ ಪೊನ್ನಾಚಿ ಗ್ರಾಪಂ ವ್ಯಾಪ್ತಿಯ 200ಕ್ಕೂ ಹೆಚ್ಚು ಜನರು ಉದ್ಯೋಗ ಚೀಟಿಯನ್ನು ಹೊಂದಿದ್ದಾರೆ. ಆದರೆ ಇಲ್ಲಿನ ಅಧಿಕಾರಿಗಳು ಜನರಿಗೆ ಉದ್ಯೋಗ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದರು. ಉದ್ಯೋಗ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಜನರು ಉದ್ಯೋಗವಿಲ್ಲದೆ ತುಂಬ ತೊಂದರೆ ಅನುಭವಿಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ಸೆ.15ರಂದು ಪೊನ್ನಾಚಿ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಗೇರಟ್ಟಿ, ಕಕ್ಕೆಹೊಲ, ಮೇಗನೂರು ಹಾಗೂ ಇನ್ನಿತರ ಗ್ರಾಮಗಳಿಂದ ನೂರಾರು ಮಹಿಳೆಯರು ಗ್ರಾಪಂ ಮುಂಭಾಗ ಆಗಮಿಸಿ ಸಾಮಾಜಿಕ ಕಾರ್ಯಕರ್ತ ಪೊನ್ನಾಚಿ ರಾಜು ಅವರ ನೇತೃತ್ವದಲ್ಲಿ ಉದ್ಯೋಗ ಚೀಟಿಯನ್ನು ಹಿಡಿದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ್ದ ತಾಪಂ ಇಒ ಉಮೇಶ್ ಅವರು ಈ ಕೂಡಲೇ ಅಗತ್ಯ ಕ್ರಮವಹಿಸಿ ಇನ್ನೆರಡು ದಿನಗಳೊಳಗೆ ಜನರಿಗೆ ಉದ್ಯೋಗ ನೀಡುವಂತೆ ಪಿಡಿಒ ಅವರಿಗೆ ಸೂಚಿಸಿದ್ದರು.

ಇದರ ಪರಿಣಾಮ ಜನರಿಗೆ ನರೇಗಾ ಯೋಜನೆಯಡಿ ಉದ್ಯೋಗ ದೊರಕಿದ್ದು, ಗುರುವಾರ ಸಾಮಾಜಿಕ ಕಾರ್ಯಕರ್ತ ಪೊನ್ನಾಚಿ ರಾಜು ಸೇರಿದಂತೆ ಗ್ರಾಪಂ ವ್ಯಾಪ್ತಿಯ 118 ಜನರು ರಸ್ತೆ ಅಭಿವೃದ್ಧಿ ಕೆಲಸದಲ್ಲಿ ಭಾಗಿಯಾಗಿದ್ದರು. ಉದ್ಯೋಗ ದೊರಕಿದಕ್ಕೆ ಜನರು ನಿಟ್ಟುಸಿರು ಬಿಟ್ಟಂತಾಗಿದೆ. ಹೋರಾಟಕ್ಕೆ ಸ್ಪಂದಿಸಿದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net