ಜಿಲ್ಲೆಯಲ್ಲಿವೆ 8436 ಅನರ್ಹ ಬಿಪಿಎಲ್ ಕಾರ್ಡ್

Published on

ಪರಿಶೀಲನೆ ವೇಳೆ ಪತ್ತೆ | ತೆರಿಗೆ ಪಾವತಿದಾರರು, ಆದಾಯ ಹೆಚ್ಚಿದ್ದವರಿಂದಲೂ ಸೌಲಭ್ಯ ದುರುಪಯೋಗ


ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ನಿಯಮಬಾಹಿರವಾಗಿ ಪಡೆದುಕೊಂಡಿದ್ದ 8,436 ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಗುರುತಿಸಲಾಗಿದೆ.
ಸರ್ಕಾರ ಆದೇಶದ ಹಿನ್ನೆಲೆಯಲ್ಲಿ ನಕಲಿ ಪಡಿತರ ಚೀಟಿ ಪತ್ತೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಒಂದೆಡೆ ಅನರ್ಹರು ಸ್ವಯಂಪ್ರೇರಣೆಯಿಂದ ಕಾರ್ಡ್ ಹಿಂತಿರುಗಿಸಲು ಅವಕಾಶ ನೀಡಲಾಗಿದೆ. ಮತ್ತೊಂದೆಡೆ ಸ್ಥಳೀಯ ಮಟ್ಟದಲ್ಲಿ ದಾಖಲೆ ಪರಿಶೀಲಿಸಿ, ನಿಯಮಾನುಸಾರ ರದ್ದುಪಡಿಸಲಾಗುತ್ತಿದೆ.
ಜಿಲ್ಲೆಯಲ್ಲಿ ತೆರಿಗೆ ಪಾವತಿದಾರರು, ಕುಟುಂಬದ ವಾರ್ಷಿಕ ಆದಾಯ ಹೆಚ್ಚಳ ಸೇರಿ ವಿವಿಧ ಕಾರಣಗಳ ಹಿನ್ನೆಲೆಯಲ್ಲಿ 8,436 ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು (ಸೆ.21)ಕ್ಕೆ ಗುರುತಿಸಿದ್ದು, ಈ ಪೈಕಿ 4,953 ಪಡಿತರ ಚೀಟಿಗಳ ಪರಿಶೀಲನೆ ಪ್ರಕ್ರಿಯೆ ನಡೆದಿದೆ. ಹಾಗೆಯೇ 1645 ಪಡಿತರ ಚೀಟಿಗಳನ್ನು ಆದ್ಯತೇತರ(ಎಪಿಎಲ್) ಕಾರ್ಡ್‌ಗಳನ್ನಾಗಿ, 3308 ಕಾರ್ಡ್‌ಗಳನ್ನು ಆದ್ಯತಾ ಪಡಿತರ ಕಾರ್ಡ್‌ಗಳನ್ನಾಗಿ ಪರಿವರ್ತಿಸಲಾಗಿದೆ. ಉಳಿದಂತೆ 3,393 ಕಾರ್ಡ್‌ಗಳ ಪರಿವರ್ತನೆಗೆ ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಪಡಿತರ ಚೀಟಿಗಳ ಪರಿಶೀಲನಾ ಪ್ರಕ್ರಿಯೆಯಲ್ಲಿ ಶೇ.59.34 ಸಾಧನೆಯಾಗಿದೆ.


ಮೃತರ ಹೆಸರು ರದ್ದು, ಕಾರ್ಡ್‌ಗಳ ಅಮಾನತು

ಪಡಿತರ ಚೀಟಿಗಳಲ್ಲಿನ ಕುಟುಂಬದ ಸದಸ್ಯರ ಪೈಕಿ ಹಲವರು ಮೃತಪಟ್ಟಿದ್ದರೂ, ಬೇರೆಡೆಗೆ ವರ್ಗಾವಣೆಯಾಗಿದ್ದರೂ ಸಂಬಂಧಪಟ್ಟವರು ಕಾರ್ಡ್‌ನಿಂದ ಅಂತಹವರ ಹೆಸರು ತೆಗೆಸಿಲ್ಲ. ಹಾಗಾಗಿ ಇಲಾಖೆಯಿಂದಲೂ ಅನರ್ಹರನ್ನು ತೆಗೆಸುವ ಪ್ರಕ್ರಿಯೆಯೂ ನಡೆಯುತ್ತಿದೆ. ಜಿಲ್ಲೆಯಲ್ಲಿ 3,779 ಮೃತ ಸದಸ್ಯರ ಹೆಸರನ್ನು ರದ್ದುಪಡಿಸಿದ್ದಲ್ಲದೇ, ಕಳೆದ 6 ತಿಂಗಳಿಂದ ಪಡಿತರ ಪಡೆಯದೇ ಇರುವ 7,452 ಕಾರ್ಡ್ ಅಮಾನತುಗೊಳಿಸಲಾಗಿದೆ.


ಹೊಸ ಪಡಿತರ ಚೀಟಿ
ಹೊಸ ಪಡಿತರ ಚೀಟಿ ಕೋರಿ 3,830 ಅರ್ಜಿಗಳು ಸಲ್ಲಿಕೆಯಾಗಿವೆ. ಈಗಾಗಲೇ 2008 ಅರ್ಜಿದಾರರಿಗೆ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಕಳೆದ 2023ರ ವಿಧಾನಸಭಾ ಚುನಾವಣಾ ನೀತಿಸಂಹಿತೆ ಜಾರಿಯ ಪೂರ್ವದಲ್ಲಿ ಹೊಸ ಪಡಿತರ ಚೀಟಿ ವಿತರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಅರ್ಜಿ ಸಲ್ಲಿಕೆಗೆ ಮತ್ತೆ ಅವಕಾಶ ನೀಡಲಾಗಿದೆ.


ಜಿಲ್ಲೆಯಲ್ಲಿ ಪಡಿತರ ಚೀಟಿ
ಜಿಲ್ಲೆಯಲ್ಲಿ 28,099 ಅಂತ್ಯೋದಯ(ಎಎವೈ), 2,73,737 ಆದ್ಯತಾ ಪಡಿತರ ಚೀಟಿ ಕುಟುಂಬಗಳು ಸೇರಿ 3,01,836 ಪಡಿತರ ಚೀಟಿಗಳು ಚಾಲ್ತಿಯಲ್ಲಿದ್ದು ಅಂತ್ಯೋದಯ ಚೀಟಿಯಡಿ 1,17,954 ಮತ್ತು ಆದ್ಯತಾ ಪಡಿತರ ಚೀಟಿಯಡಿ 8,96,840 ಲಾನುಭವಿಗಳು ಸೇರಿ 10,14,794 ಲಾನುಭವಿಗಳಿದ್ದಾರೆ.


ಇ-ಕೆವೈಸಿ ಸಾಧನೆ

ಜಿಲ್ಲೆಯಲ್ಲಿ ಪಡಿತರ ಚೀಟಿ ಇ-ಕೆವೈಸಿ ಪ್ರಕ್ರಿಯೆಯಲ್ಲಿ ಶೇ.96.97ರಷ್ಟು ಸಾಧನೆ ಮಾಡಲಾಗಿದೆ. ಅಂತ್ಯೋದಯದ 10,14,794 ಲಾನುಭವಿಗಳ ಪೈಕಿ 9,84,000 ಲಾನುಭವಿಗಳು ಆಧಾರ್ ಸಂಖ್ಯೆಯನ್ನು ಜೋಡಿಸುವುದರೊಂದಿಗೆ ನಿಯಮಾನುಸಾರ ಇ-ಕೆವೈಸಿ ಮಾಡಿಕೊಡಲಾಗಿದೆ.


ನಿಲ್ಲದ ಪಡಿತರ ಅಕ್ರಮ
ಬಡಜನರಿಗೆ ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ಆಹಾರ ಪದಾರ್ಥ ವಿತರಿಸುವ ಪಡಿತರ ಚೀಟಿಗಳಲ್ಲಿ ಅಕ್ರಮ ನಿಂತಿಲ್ಲ. ಅಧಿಕಾರಿಗಳ ಕಟ್ಟುನಿಟ್ಟಿನ ಎಚ್ಚರಿಕೆಯ ಆದೇಶ, ಕಾರ್ಯಾಚರಣೆಗಳ ನಡುವೆಯೂ ಅನರ್ಹರು ಕಾರ್ಡ್ ಪಡೆದುಕೊಂಡಿದ್ದು, ಪ್ರತಿಬಾರಿ ಪರಿಶೀಲನೆ ಸಂದರ್ಭದಲ್ಲಿ ಪ್ರಭಾವಿಗಳು ಸುಳ್ಳು ದಾಖಲೆ ಕೊಟ್ಟು ತಪ್ಪಿಸಿಕೊಳ್ಳುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆದುಕೊಂಡ ಆಹಾರ ಪದಾರ್ಥಗಳನ್ನು ಹೋಟೆಲ್, ಅಂಗಡಿಗಳಿಗೆ ಮಾರಿಕೊಳ್ಳುವ ದೊಡ್ಡ ದಂಧೆ ನಡೆಯುತ್ತಿದೆ. ಇದಕ್ಕೆ ಇತ್ತೀಚೆಗೆ ಬಾಗೇಪಲ್ಲಿ ಚೆಕ್‌ಪೋಸ್ಟ್ ಬಳಿ ಸರಕು ಸಾಗಣೆ ವಾಹನವನ್ನು ಮಾಲು ಸಮೇತ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದೇ ನಿದರ್ಶನ. ನ್ಯಾಯಬೆಲೆ ಅಂಗಡಿಯ ಪದಾರ್ಥಗಳಿಗೆ ಪಾಲಿಶ್ ಮಾಡಿ, ದುಬಾರಿ ದರಕ್ಕೆ ಮಾರಿಕೊಳ್ಳುವಂತಹ ಪ್ರಕರಣಗಳೂ ವರದಿಯಾಗುತ್ತಿವೆ.

ಎಲ್ಲ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಪಡಿತರ ಚೀಟಿ ಅಗತ್ಯವಾಗಿದ್ದು, ಬಹುತೇಕ ಎಲ್ಲರೂ ಪಡೆಯುತ್ತಿದ್ದಾರೆ. ಇದು ಅನರ್ಹ ಸಂಖ್ಯೆ ಹೆಚ್ಚಳ, ಕಾಳಸಂತೆಯಲ್ಲಿ ಆಹಾರ ಪದಾರ್ಥಗಳ ಮಾರಾಟಕ್ಕೆ ಪ್ರಮುಖ ಕಾರಣವಾಗಿದೆ. ಅರ್ಹರನ್ನು ಗುರುತಿಸುವಲ್ಲಿ ಅವೈಜ್ಞಾನಿಕ ಮಾನದಂಡಗಳು ಅಡ್ಡಿಯಾಗಿವೆ. ಸುಳ್ಳು ಲೆಕ್ಕದಲ್ಲಿ ವ್ಯವಹಾರ ನಡೆಯುತ್ತಿದೆ. ಇದರಿಂದ ಸರ್ಕಾರಕ್ಕೆ ಮಾತ್ರ ಅಧಿಕ ಹೊರೆ ಬೀಳುತ್ತಿದೆ. -ಮುನಿರಾಜು, ವಕೀಲ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net