

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಹೆಚ್ಚು ಅಪಘಾತಗಳಿಗೆ ಎಡೆಮಾಡಿಕೊಡುವ ಬ್ಲ್ಯಾಕ್‌ಸ್ಪಾಟ್‌ಗಳನ್ನು ಪರಿಶೀಲಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸೂಚಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಸ್ತೆ ಅಪಘಾತ ಸಂಭವಿಸಿರುವ ಅಂಕಿ-ಅಂಶಗಳು ಹಾಗೂ ಇತರ ಸುರಕ್ಷತಾ ಅಂಶಗಳನ್ನು ಪರಿಗಣಿಸಿ ಜಿಲ್ಲೆಯಲ್ಲಿ ಒಟ್ಟು 29 ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಆ ಸ್ಥಳಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
2022ರಿಂದ ಈವರೆಗೆ ರಸ್ತೆ ಅಪಘಾತ ಸಂಭವಿಸಿರುವ ಅಂಕಿ-ಅಂಶಗಳು ಹಾಗೂ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಕೊರತೆಗಳುಳ್ಳ ಇತರ ಅಂಶಗಳನ್ನು ಪರಿಗಣಿಸಿ ಈಗಾಗಲೇ 29 ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಇಂತಹ ಪ್ರದೇಶಗಳನ್ನು ಪರಿಶೀಲಿಸಿ, ಅಪಘಾತಗಳಿಗೆ ಕಡಿವಾಣ ಹಾಕಬೇಕು. ಜಿಲ್ಲೆಯಲ್ಲಿ ಪ್ರತಿ ರಸ್ತೆಯ ಅಭಿವೃದ್ಧಿ ಕಾಮಗಾರಿಗಳಲ್ಲಿ ರಸ್ತೆ ಸುರಕ್ಷತಾ ಅಂಶಗಳಿಗೆ ಒತ್ತು ನೀಡಬೇಕು. ಹೆದ್ದಾರಿಗಳಲ್ಲಿ ಆ್ಯಂಬುಲೆನ್ಸ್ ಸೇವೆ ಮತ್ತು ಟ್ರಾಮಾ ಕೇಂದ್ರಗಳ ಜಾಲ ಸ್ಥಾಪನೆ, ಹೈವೇ ಪೆಟ್ರೋಲಿಂಗ್ ಕಾರ್ಯ ಮತ್ತಷ್ಟು ಚುರುಕು, ಹೆದ್ದಾರಿಗಳ ಅಂಡರ್‌ಪಾಸ್‌ಗಳಲ್ಲಿ ಸರ್ವೀಸ್ ರಸ್ತೆ ಮುಂದೆ ಮುಖ್ಯರಸ್ತೆಗೆ ವಾಹನಗಳು ತೆರಳದಂತೆ ಕ್ರಾಷ್ ಬ್ಯಾರಿಯರ್ ಅಳವಡಿಕೆ, ಹೆದ್ದಾರಿಗಳ ಪಕ್ಕದ ಸರ್ವೀಸ್ ರಸ್ತೆಗಳಲ್ಲಿನ ಗುಂಡಿಗಳ ದುರಸ್ತಿ, ಮುಖ್ಯ ಜಂಕ್ಷನ್‌ಗಳಲ್ಲಿ ದೀಪ ಅಳವಡಿಸುವುದು ಸೇರಿ ವಿವಿಧ ಸಲಹೆಗಳನ್ನು ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಂಗಸ್ವಾಮಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತ ಡಿ.ಎಸ್. ಗಿರೀಶ್ ಮತ್ತಿತರರು ಇದ್ದರು.
ಜಾಗೃತಿ ಭಿತ್ತಿಪತ್ರಗಳ ಬಿಡುಗಡೆ
ಮಕ್ಕಳ ಬಗ್ಗೆ ನಿಗಾ ಇರಿಸಿ ವಾಹನ ಚಲಾಯಿಸಿ ಎಂಬ ಸಂದೇಶ ಸಾರುವ ರಸ್ತೆ ಸುರಕ್ಷಾ ಜಾಗೃತಿಯ ಭಿತ್ತಿಪತ್ರ ಮತ್ತು ಕರಪತ್ರಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು.