

* ಡಿಸಿಎಂ ತವರಲ್ಲೇ ಶಿಕ್ಷಕರಿಗೆ ಬರ!
* ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ವಿಫಲ
ಗಂಗಾಧರ್ ಬೈರಾಪಟ್ಟಣ ರಾಮನಗರ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತವರು ಕ್ಷೇತ್ರ ಕನಕಪುರದಲ್ಲಿನ ಶಿಕ್ಷಕರ ಬರ ಈ ಬಾರಿಯೂ ನೀಗಿಲ್ಲ. ರಾಮನಗರ ಜಿಲ್ಲೆ ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆಯನ್ನು ಸರ್ಕಾರಿ ಶಾಲೆಗಳು ಎದುರಿಸುತ್ತಿದ್ದು, ಕನಕಪುರ ಇದರಲ್ಲಿ ಸಿಂಹ ಪಾಲು ಹೊಂದಿದೆ.
ರಾಮನಗರ ಜಿಲ್ಲೆ ಶೇ.32 ಶಿಕ್ಷಕರ ಕೊರತೆ ಎದುರಿಸುತ್ತಿದ್ದು, ಇದನ್ನು ಪರಿಹಾರ ಮಾಡುವುದಾಗಿ ಹೇಳುತ್ತಲೇ ಇರುವ ಸರ್ಕಾರ, ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗುತ್ತಲೇ ಇದೆ.
ಮೇ 31ರಿಂದ ಶಾಲೆಗಳು ಪುನರಾರಂಭಗೊಳ್ಳಲಿದ್ದು, ಇದಕ್ಕಾಗಿ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ, ಬಹುತೇಕ ಶಾಲೆಗಳಿಗೆ ಅಗತ್ಯ ಶಿಕ್ಷಕರೇ ಇಲ್ಲದೆ, ಗುಣಮಟ್ಟದ ಶಿಕ್ಷಣ ಖಾತ್ರಿ ಇಲ್ಲದಂತಾಗಿದೆ.
ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗಳು ಇವೆ. ಇವುಗಳಿಗೆ ಒಟ್ಟು 3508 ಮಂಜೂರಾದ ಶಿಕ್ಷಕರ ಹುದ್ದೆಗಳಿದ್ದು, ಇವುಗಳಲ್ಲಿ ಬರೋಬ್ಬರಿ 1123 ಹುದ್ದೆಗಳು ಖಾಲಿ ಇವೆ ಎಂದರೆ ಅಚ್ಚರಿ ಪಡಬೇಕಿಲ್ಲ. ಆದರೆ, ವಾಸ್ತವ ಸಂಗತಿಯಾಗಿದೆ. ಕಳೆದ ಬಾರಿ ನಡೆದ ಕೌನ್ಸೆಲಿಂಗ್‌ನಲ್ಲಿ ಹಲವು ಮಂದಿ ವರ್ಗಾವಣೆಗೊಂಡು ತವರು ಜಿಲ್ಲೆಗಳಿಗೆ ತೆರಳಿದರು. ಆದರೆ, ಖಾಲಿಯಾದಷ್ಟು ಹುದ್ದೆಗಳು ಭರ್ತಿ ಆಗಲೇ ಇಲ್ಲ. ಇದರ ಪರಿಣಾಮ ಹೆಚ್ಚಿನ ಹುದ್ದೆಗಳು ಖಾಲಿ ಉಳಿದಿವೆ. ಇದರ ಪರಿಣಾಮ ಜಿಲ್ಲೆಯ ಸುಮಾರು 130 ಶಾಲೆಗಳು ಶಿಕ್ಷಕ ರಹಿತ ಶಾಲೆಗಳಾಗಿವೆ.
ಶಿಕ್ಷಕರ ಕೊರತೆಯಲ್ಲಿ ಕನಕಪುರ ಮುಂಚೂಣಿಯಲ್ಲಿದೆ. ಕಳೆದ ಬಾರಿ ಶಿಕ್ಷಕರ ವರ್ಗಾವಣೆಯಿಂದಾಗಿ 80 ಶಾಲೆಗಳು ಶಿಕ್ಷಕ ರಹಿತ ಶಾಲೆಗಳಾಗಿದ್ದವರು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದರಿಂದ ಎಚ್ಚೆತ್ತ ಕ್ಷೇತ್ರದ ಶಾಸಕರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ವರ್ಗಾವಣೆಯನ್ನು ತಾತ್ಕಾಲಿಕವಾಗಿ ತಡೆಯುವ ಮೂಲಕ ಕೊರತೆ ನೀಗಿಸುವ ಪ್ರಯತ್ನ ಮಾಡಿದರು. ಆದರೆ, ಅದು ತಾತ್ಕಾಲಿಕ ಪರಿಹಾರ ಮಾತ್ರವೇ ಆಗಿತ್ತು.
ಆದರೆ, ಈ ಬಾರಿ ಕನಕಪುರದಲ್ಲಿ ಬರೋಬ್ಬರಿ 533 ಹುದ್ದೆಗಳ ಕೊರತೆ ಇದೆ. ಅವಿಭಜಿತ ಕನಕಪುರ ತಾಲೂಕಿಗೆ ಒಟ್ಟು 1160 ಹುದ್ದೆಗಳು ಮಂಜೂರಾಗಿದ್ದರೂ, 533 ಹುದ್ದೆಗಳು ಖಾಲಿ ಇವೆ. ಅರಣ್ಯ ಪ್ರದೇಶದ ಜನವಸತಿ ಪ್ರದೇಶದಲ್ಲಿಯೇ ಅತಿ ಹೆಚ್ಚು ಶಾಲೆಗಳು ಇರುವ ಕಾರಣ ಇಲ್ಲಿಗೆ ಶಿಕ್ಷಕರು ಬರಲೂ ಹಿಂಜರಿಯುತ್ತಿದ್ದಾರೆ. ಇಲ್ಲಿ ಶಿಕ್ಷಕ ರಹಿತ ಶಾಲೆಗಳ ಸಂಖ್ಯೆ 90 ದಾಟಿದೆ. ಇದರಿಂದಾಗಿ ಡಿಸಿಎಂ ಕ್ಷೇತ್ರಕ್ಕೆ ಕಳಂಕ ಅಂಟಿಕೊಂಡಂತೆ ಆಗಿದೆ.
ಶಿಕ್ಷಕರ ಕೊರತೆ ನೀಗಿಸಲು ಸರ್ಕಾರ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳುವ ಪರಿಪಾಠ ಬೆಳೆಸಿಕೊಂಡು ಬಂದಿದೆ. ಆದರೆ, ಈಗ ಅತಿಥಿ ಶಿಕ್ಷಕರಿಗೂ ಬರ ಎದುರಾಗಿದೆ. ಸರ್ಕಾರ ಕೊಡುವುದಕ್ಕಿಂತ ಹೆಚ್ಚಿನ ಸಂಬಳವನ್ನು ನಿಗದಿತ ಸಮಯದಲ್ಲಿಯೇ ಖಾಸಗಿ ಶಾಲೆಗಳೇ ನೀಡುವ ಕಾರಣ ಅರ್ಹ ಶಿಕ್ಷಕರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡಲು ಹಿಂಜರಿಯುತ್ತಿದ್ದಾರೆ. ಈಗಾಗಲೇ ಶಿಕ್ಷಕರ ಕೊರತೆ ಬಗ್ಗೆ ಮಾಹಿತಿ ಕಲೆ ಹಾಕಿರುವ ಶಾಲಾ ಶಿಕ್ಷಣ ಇಲಾಖೆ ಗೆಸ್ಟ್ ಟೀಚರ್‌ಗಳ ನೇಮಕಕ್ಕೆ ಸಿದ್ಧತೆ ನಡೆಸಿದ್ದು, ಕೊರತೆಯನ್ನು ಸಂಪೂರ್ಣ ನೀಗಿಸುವುದು ಕಷ್ಟವೇ ಆಗಲಿದೆ.
ಮಾದರಿ ಶಾಲೆ ಪರ್ಯಾಯ
ಶಿಕ್ಷಕರ ಕೊರತೆ ನೀಗಿಸಲು ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಗ್ರಾಪಂಗೊಂದು ಮಾದರಿ ಶಾಲೆ ಪಾರ್ಯಾಯವಾಗಲಿದೆ. ರಾಜ್ಯಾದ್ಯಂತ 2 ಸಾವಿರ ಮತ್ತು ರಾಮನಗರ ಜಿಲ್ಲೆಯಲ್ಲಿ ಸಿಎಸ್‌ಆರ್ ನಿಧಿ ಬಳಕೆ ಮಾಡಿಕೊಂಡು 20 ಮಾದರಿ ಶಾಲೆಗಳನ್ನು ನಿರ್ಮಿಸುವುದಾಗಿ ಡಿಸಿಎಂ ಹೇಳಿದ್ದಾರೆ. ಆದರೆ, ಇದು ಬೇಗ ಕಾರ್ಯರೂಪಕ್ಕೆ ಬಂದರಷ್ಟೇ ಸರ್ಕಾರಿ ಶಾಲೆಗಳಿಗೆ ಉಳಿಗಾಲ ಇಲ್ಲವಾದರೆ ಮತ್ತಷ್ಟು ಸರ್ಕಾರಿ ಶಾಲೆಗಳು ಬಂದ್ ಆಗುವುದರಲ್ಲಿ ಅನುಮಾನವೇ ಇಲ್ಲ.
ಶಿಕ್ಷಕರ ಕೊರತೆ ಎನ್ನುವುದು ಕೇವಲ ಪ್ರಾಥಮಿಕ ಶಾಲಾ ವಿಭಾಗಕ್ಕೆ ಮಾತ್ರ ಸೀಮಿತವಲ್ಲ, ಪ್ರೌಢಶಾಲೆ ವಿಭಾಗದಲ್ಲಿಯೂ ಶಿಕ್ಷಕರ ಕೊರತೆ ಹೆಚ್ಚು ಕಾಡುತ್ತಿದೆ. ಜಿಲ್ಲೆಯಲ್ಲಿ 47 ದೈಹಿಕ ಶಿಕ್ಷಣ ಶಿಕ್ಷಕರು, ಇತರೆ ವಿಷಯಗಳ ಶಿಕ್ಷಕರು 193 ಮತ್ತು 17 ಮುಖ್ಯೋಪಾಧ್ಯಾಯರ ಕೊರತೆ ಇದೆ.
==
ಜಿಲ್ಲೆಗೆ ಮಂಜೂರಾದ ಒಟ್ಟು 3508 ಹುದ್ದೆಗಳಲ್ಲಿ 1123 ಶಿಕ್ಷಕ ಹುದ್ದೆಗಳು ಖಾಲಿ ಇವೆ. ಈ ಬಗ್ಗೆ ಡೇಟಾಬೇಸ್ ಮೂಲಕ ಮಾಹಿತಿಯನ್ನು ನಮ್ಮ ಇಲಾಖೆ ಪಡೆದುಕೊಂಡಿದೆ. ಕೊರತೆ ಇರುವ ಕಡೆಗಳಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಕ್ರಮವಹಿಸಲಿದೆ. ಪುರುಷೋತ್ತಮ್ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ
---
ಶಿಕ್ಷಕರ ಕೊರತೆಯಿಂದಾಗಿ ಶಾಲೆಗಳಲ್ಲಿ ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುವ ಜತೆಗೆ, ಹೆಚ್ಚುವರಿ ಜಾವಾಬ್ದಾರಿಯಿಂದ ಶಿಕ್ಷಕರೂ ಗುಣಮಟ್ಟದ ಶಿಕ್ಷಣ ನೀಡಲು ತೊಡಕಾಗುತ್ತಿದೆ. ಸರ್ಕಾರ ಕೂಡಲೇ ಕೊರತೆ ನೀಗಿಸಲು ಹೆಚ್ಚು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ರಮೇಶ್ ರಾವಗೋಡ್ಲುಅಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಸಂಘ, ರಾಮನಗರ