

ಬನ್ನಿಕುಪ್ಪೆ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಏ.26ರಂದು ಮತದಾನ ನಡೆಯಲಿದ್ದು ಮತದಾರರನ್ನು ಸೆಳೆಯಲು ಬನ್ನಿಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಷಯಾಧಾರಿತ ಮತಗಟ್ಟೆಯನ್ನು ತೆರೆಯಲಾಗಿದೆ.
ಮತಗಟ್ಟೆ ಕೇಂದ್ರವನ್ನು ತೆಂಗಿನಗರಿ, ಹೊಂಗೆ ಸೊಪ್ಪಿನ ಚಪ್ಪರ, ಮಾವಿನ ಹಾಗೂ ಹೂವಿನ ತೋರಣದಿಂದ ಅಲಂಕಾರ ಮಾಡಲಾಗಿದೆ. ಮತದಾರರಿಗೆ ಜಲಾನಯನ ಮಾದರಿ, ತಿರುಗಾಲುವೆ ತಡೆಗೋಡೆ, ಬೋರ್ಡರ್‌ಚೆಕ್, ಕೃಷಿಹೊಂಡ, ನೀರು ಕೋಡಿ, ಖುಷ್ಕಿ, ತೋಟಗಾರಿಕೆ, ಗ್ರಾಮ ಪಂಚಾಯಿತಿಯ ಕಾರ್ಯಾಲಯ, ಸರ್ಕಾರಿ ಪ್ರಾಥಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶುಆಸ್ಪತ್ರೆ ಮತ್ತು ರೈತಸಂಪರ್ಕ ಕೇಂದ್ರ, ಯೋಜನೆಗಳು ಸೇರಿದಂತೆ ಹನಿ ನೀರಾವರಿ ಪದ್ಧತಿಯ ತೋಟಗಾರಿಕೆ, ರೈತರು ಜಮೀನಿನ ಬದುಗಳಲ್ಲಿ ನೀರನ್ನು ಇಂಗಿಸುವುದು, ಕೆರೆಕಟ್ಟೆಗಳನ್ನು ಅಭಿವೃದ್ಧಿಪಡಿಸುವುದು, ನೀರನ್ನು ಮಿತವಾಗಿ ಬಳಸುವುದು ಸೇರಿದಂತೆ ಹಲವು ಮಾಹಿತಿಯನ್ನು ಮತದಾರರಿಗೆ ನೀಡುವಂತೆ ಮತಗಟ್ಟೆಯನ್ನು ಸಿದ್ಧಪಡಿಸಲಾಗಿದೆ.
ಬನ್ನಿಕುಪ್ಪೆ ಗ್ರಾಮದಲ್ಲಿ ಮೂರು ಮುಖ್ಯ ಮತಗಟ್ಟೆಗಳಿದ್ದು, ಸಹಾಯಕರು ಹಾಗೂ ಅಂಗವಿಕಲರನ್ನು ಕರೆತರಲು ವ್ಹೀಲ್ ಚೇರ್‌ಗಳು, ವೈದ್ಯಕೀಯ, ಕುಡಿಯುವ ನೀರಿನ ಸೌಲಭ್ಯ ಹಾಗೂ ಬೂತ್‌ಗಳ ಮಾಹಿತಿ ನೀಡಲು ಒಬ್ಬ ಸಹಾಯಕರನ್ನು ನೇಮಿಸಲಾಗಿದೆ.
ಗ್ರಾಮದಲ್ಲಿ ಸುಮಾರು 2854 ಮತದಾರರಿದ್ದಾರೆ. ಯುವ ರೈತರಿಗೆ ಮತ್ತು ಮತದಾರರಿಗೆ ನೀರು, ಪರಿಸರ ಸಂರಕ್ಷಣೆ ಮನದಟ್ಟಾಗುವಂತೆ ಚಿತ್ರದ ಮೂಲಕ ಸಂದೇಶವನ್ನು ಸಾರಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪ್ರಸನ್ನ ವಿಜಯವಾಣಿಗೆ ತಿಳಿಸಿದರು.