ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ, ವಿಶ್ವ ಹಿಂದು ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ ನೇತೃತ್ವದಲ್ಲಿ ಗ್ರಾಮದ ಭಕ್ತರ ಸಭೆ ನಡೆಯಿತು.
ತೆಕ್ಕಾರು ಶ್ರೀ ಗೋಪಾಲಕೃಷ್ಣ್ಣ ದೇವಸ್ಥಾನ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಕ್ಷೇತ್ರದ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿ ಪುಂಡಾಟ ಮೆರೆಯಲು ಯತ್ನಿಸಿದ ವಿಘ್ನ ಸಂತೋಷಿಗಳಿಗೆ ಪ್ರತಿಕ್ರಿಯಿಸಿದ್ದರು. ಶಾಸಕರ ಪ್ರತಿಕ್ರಿಯೆಗೆ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಹೆಚ್ಚಿನ ಟ್ರಸ್ಟಿಗಳು, ದೇವಸ್ಥಾನದ ಆಡಳಿತ ಮಂಡಳಿ ಬೆಂಬಲಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಕುರಿತಂತೆ ಆಡಳಿತ ಮಂಡಳಿಯಿಂದ ಸೌಹಾರ್ದ ಸಭೆ ನಡೆದಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ. ಆಡಳಿತ ಮಂಡಳಿಯಿಂದ ಯಾವುದೇ ಟ್ರಸ್ಟ್ ಸಭೆ ನಡೆಸಿಲ್ಲ ಎಂದು ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಪೂಜಾರಿ, ಕಾರ್ಯದರ್ಶಿ ಮಂಜುನಾಥ್ ಸಾಲ್ಯಾನ್, ಇತರ ಟ್ರಸ್ಟಿಗಳು ಸ್ವಷ್ಟಪಡಿಸಿದ್ದಾರೆ. ಯಾರಾದರೂ ವೈಯಕ್ತಿಕವಾಗಿ ವ್ಯವಹರಿಸಿದ್ದರೆ ಅದಕ್ಕೆ ಆಡಳಿತ ಮಂಡಳಿ ಜವಾಬ್ದಾರಿಯಲ್ಲ ಎಂದು ಟ್ರಸ್ಟಿಗಳು ಅಭಿಪ್ರಾಯಪಟ್ಟರು.
ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಟ್ಯೂಬ್ ಲೈಟ್, ಡೀಸೆಲ್ ಕದ್ದವರ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ದೇವಸ್ಥಾನದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಪೂಜಾರಿ, ಕಾರ್ಯದರ್ಶಿ ಮಂಜುನಾಥ ಸಾಲ್ಯಾನ್, ಟ್ರಸ್ಟಿಗಳು, ಬ್ರಹ್ಮಕಲಶೋತ್ಸವದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ರೈ, ವಿಶ್ವ ಹಿಂದು ಪರಿಷತ್ ಪ್ರಮುಖರಾದ ಸುಧೀರ್, ಗ್ರಾಮಸ್ಥರು ಉಪಸ್ಥಿತರಿದ್ದರು.
ಶಾಸಕರ ಹೇಳಿಕೆಗೆ ಬದ್ಧ
ದೇವಸ್ಥಾನದ ಪ್ರಾರಂಭದ ಕಾರ್ಯಗಳಿಂದ ಬ್ರಹ್ಮಕಲಶೋತ್ಸವದವರೆಗೂ ವಿಶ್ವ ಹಿಂದು ಪರಿಷತ್ ಬಜರಂಗದಳ ತೆಕ್ಕಾರಿನಲ್ಲಿ ಜತೆಯಾಗಿ ಆಡಳಿತ ಮಂಡಳಿಯೊಂದಿಗಿದ್ದು, ಧರ್ಮ ಕಾರ್ಯದ ಶಾಸಕರ ಕೊಡುಗೆ ಬೆಂಬಲಿಸಿ ಗೌರವಿಸಿದೆ. ಈ ನಿಟ್ಟಿನಲ್ಲಿ ಯಾರೊಂದಿಗೂ ವಿಷಾದ ವ್ಯಕ್ತಪಡಿಸುವ ಪ್ರಮೇಯವಿಲ್ಲ. ಶಾಸಕರ ಹೇಳಿಕೆಗೆ ಬದ್ಧವಾಗಿದೆ ಎಂದು ಆಡಳಿತ ಮಂಡಳಿ ತೀರ್ಮಾನ ತೆಗೆದುಕೊಂಡಿದೆ.