

ಮಂಗಳೂರು: ಕಳೆದ ಎಂಟು ವರ್ಷಗಳಿಂದ ದೇಶದಲ್ಲಿ ಅಭಿವೃದ್ಧಿಯ ಶಕೆಯನ್ನೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೂ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂ ಅವರು ದೇಶದಲ್ಲಿ ನಿರುದ್ಯೋಗದ ಬಗ್ಗೆ ಆರೋಪಿಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸಿಗರು ದೇಶದ ಜನತೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದರು.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಸ್ತವದಲ್ಲಿ ರಾಹುಲ್ ಹಾಗೂ ಕಾಂಗ್ರೆಸಿಗರು ತಮ್ಮ ರಾಜಕೀಯ ನಿರುದ್ಯೋಗವನ್ನೇ ದೇಶದ ನಿರುದ್ಯೋಗ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಕಳೆದ ಎಂಟು ವರ್ಷದಲ್ಲಿ ಉದ್ಯೋಗ ನೋಂದಣಿ ಸಂಖ್ಯೆ 9.5 ಕೋಟಿನಿಂದ 27 ಕೋಟಿಗೆ ಏರಿಕೆಯಾಗಿದೆ. ನಿರುದ್ಯೋಗವಾದರೆ ಇಷ್ಟೊಂದು ಸಂಖ್ಯೆಯಲ್ಲಿ ಉದ್ಯೋಗ ನೋಂದಣಿ ಹೇಗೆ ಸಾಧ್ಯವಾಯಿತು ಎಂದರು.
ದೇಶದಲ್ಲಿ ಹಾಗೂ ರಾಜ್ಯಗಳಲ್ಲಿ ಸ್ಥಿರ ಸರ್ಕಾರಗಳಿದ್ದರೆ ಮಾತ್ರ ಅಭಿವೃದ್ಧಿ ದಾಪುಗಾಲು ಹಾಕಲು ಸಾಧ್ಯ. ಅತಂತ್ರ ಸರ್ಕಾರ ರಚನೆಗೆ ಅವಕಾಶ ನೀಡದೆ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ರಚನೆಗೆ ಜನತೆ ಮುಂದಾಗುತ್ತಾರೆ ಎಂದರು.