ಆನ್​ಲೈನ್​ ತರಗತಿಯನ್ನೇ ದುಡಿಮೆಯ ಮೂಲವಾಗಿಸಿಕೊಂಡ ಕಳ್ಳ! ಅಡ್ಡದಾರಿ ಹಿಡಿದು ಸಿಕ್ಕಿಬಿದ್ದ...

ಮೊಬಿಲೆ
Published on

ಬೆಂಗಳೂರು: ದುಷ್ಚಟಕ್ಕೆ ಹಣ ಹೊಂದಿಸಲು ದಾರಿಹೋಕರ ಮೊಬೈಲ್ ಕದ್ದು ಆನ್ ಲೈನ್ ತರಗತಿಗಾಗಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.

ಜೆ.ಸಿ.ನಗರದ ಬೆಸ್ಸಂನ್ ಟೌನ್ ನಿವಾಸಿ ಧನುಷ್ ಅಲಿಯಾಸ್ ಡಿಡಿ (18) ಬಂಧಿತ. ಚಿಕ್ಕ ವಯಸ್ಸಿನಲ್ಲೇ ಮದ್ಯ, ಡ್ರಗ್ಸ್, ಧೂಮಪಾನ ವ್ಯಸನಿಯಾದ ಧನುಷ್, ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟಿದ್ದನು. ದುಷ್ಚಟಗಳಿಗೆ ಹಣ ಹೊಂದಿಸಲು ಅಡ್ಡದಾರಿ ಹಿಡಿದ ಆರೋಪಿ ಮೊಬೈಲ್ ಕಳ್ಳತನಕ್ಕೆ ಇಳಿದಿದ್ದ. ಕೆ.ಆರ್.ಪುರ, ಚಾಮರಾಜಪೇಟೆ, ಅಶೋಕನಗರ, ಸಂಜಯನಗರ, ಹೆಬ್ಬಾಳ, ಕೆ.ಜಿ.ಹಳ್ಳಿ.‌ ಸದಾಶಿವನಗರ ಸೇರಿದಂತೆ ನಗರದ ವಿವಿಧೆಡೆ ಧನುಷ್ ತನ್ನ ಸ್ನೇಹಿತನ ಜತೆ ಬೈಕ್​ನಲ್ಲಿ ಸುತ್ತಾಡುತ್ತಿದ್ದ. ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಓಡಾಡುವ ಅಡ್ಡಗಟ್ಟಿ ಮೊಬೈಲ್ ಸುಲಿಗೆ ಮಾಡುತ್ತಿದ್ದರು. ಇಲ್ಲವಾದರೆ, ದಾರಿಹೋಕರು ಮೊಬೈಲ್ ನಲ್ಲಿ ಸಂಭಾಷಣೆ ಮಾಡಿಕೊಂಡು ‌ಹೋಗುತ್ತಿದ್ದರೇ ಏಕಾಏಕಿ ಕಸಿದುಕೊಂಡು ಹೋಗುತ್ತಿದ್ದರು.ಇತ್ತೀಚೆಗೆ ಸಂಜಯನಗರದಲ್ಲಿ ಅನುಮಾನಾಸ್ಪದವಾಗಿ ಧನುಷ್ ಓಡಾಡುತ್ತಿದ್ದ. ಮಫ್ತಿಯಲ್ಲಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಲವು ಮೊಬೈಲ್ ಗಳು ಪತ್ತೆಯಾಗಿವೆ. ಮೊಬೈಲ್ ಗಳ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಕೊನೆಗೆ ಠಾಣೆಗೆ

ಕರೆದೊಯ್ದು ತೀವ್ರ ವಿಚಾರಣೆ ನಡೆಸಿದಾಗ ಧನುಷ್ ‌ತಪ್ಪೋಪ್ಪಿಕೊಂಡಿದ್ದಾನೆ. ಮತ್ತೊಬ್ಬ ಆರೋಪಿ ಸಿಗಬೇಕಾಗಿದೆ. ಬಂಧಿತನಿಂದ 4.5 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 32 ಮೊಬೈಲ್ ‌ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆನ್ ಲೈನ್ ಕ್ಲಾಸ್​ಗೆ ಕದ್ದ ಮೊಬೈಲ್ ಬಳಕೆ:

ಶಾಲೆಯಿಂದ ದೂರಾಗಿದ್ದ ಧನುಷ್, ತನ್ನ ಸ್ನೇಹಿತರ ಜತೆಗೆ ಸಂಪರ್ಕ ಹೊಂದಿದ್ದ. ಸ್ನೇಹಿತರು ವ್ಯಾಸಂಗ ಮಾಡುತ್ತಿದ್ದರು. ಧನುಷ್ ಕದ್ದ ಮೊಬೈಲ್​ಗಳನ್ನು ತನ್ನ ಸ್ನೇಹಿತರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಕದ್ದ ಮೊಬೈಲ್​ನಲ್ಲಿ ಆನ್​ಲೈನ್ ತರಗತಿಗೆ ಹಾಜರಾಗುತ್ತಿದ್ದರು. ಸಾಕಷ್ಟು ಮೊಬೈಲ್​ಗಳನ್ನು ಕೊಳಚೆ ಪ್ರದೇಶದ ಕುಟುಂಬಕ್ಕೆ ಮಾರಾಟ ಮಾಡಿದ್ದ. ಕೆಲವು ಫೋನ್ ಧನುಷ್ ಬಳಿಯೇ ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net