

ಉಳ್ಳಾಲ: ಕೊಲ್ಯದ ಎರಡು ಖಾಸಗಿ ಶಾಲೆಗಳ ಸಿ.ಸಿ ಕ್ಯಾಮರಾಗಳನ್ನು ತಿರುಗಿಸಿ ಶಾಲೆಯೊಳಗೆ ನುಗ್ಗಿದ ಕಳ್ಳರು ಒಂದು ಶಾಲೆಯಲ್ಲಿ ಪಿಕ್ನಿಕ್‌ಗೆ ಸಂಗ್ರಹಿಸಿಟ್ಟಿದ್ದ ಹಣದೊಂದಿಗೆ ಪರಾರಿಯಾಗಿದ್ದಾರೆ.
ಕೊಲ್ಯ ಸಂತ ಜೋಸೆರ ಜಾಯ್‌ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆ, ಕೋಟೆಕಾರಿನ ಸ್ಟೆಲ್ಲಾ ಮೇರಿಸ್ ಕನ್ನಡ ಮಾಧ್ಯಮ ಶಾಲೆಗೆ ಕಳ್ಳರು ನುಗ್ಗಿದ್ದಾರೆ. ಜಾಯ್‌ಲ್ಯಾಂಡ್ ಶಾಲೆ ಪ್ರಾಂಶುಪಾಲರ ಕಚೇರಿ, ಕಪಾಟುಗಳ ಬೀಗ ಒಡೆದು ತಡಕಾಡಿದ ಕಳ್ಳರು ವಿದ್ಯಾರ್ಥಿಗಳಿಂದ ಪಿಕ್ನಿಕ್‌ಗೆ ಸಂಗ್ರಹಿಸಿಟ್ಟಿದ್ದ 26 ಸಾವಿರ ರೂ. ದೋಚಿದ್ದಾರೆ. ಈ ಶಾಲೆಯಲ್ಲಿ ಮೂರನೇ ಬಾರಿಗೆ ಕಳ್ಳತನ ನಡೆದಿದೆ.
ಕೋಟೆಕಾರ್ ಸ್ಟೆಲ್ಲಾ ಮೇರಿಸ್ ಶಾಲೆಗೆ ಮುಂಜಾನೆ 4.30ರ ವೇಳೆಗೆ ಕಳ್ಳನೊಬ್ಬ ಕನ್ನ ಹಾಕಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಟಾಫ್ ರೂಂನ ಕಪಾಟು ಒಡೆದು ತಡಕಾಡಿದ ಕಳ್ಳ ಪ್ರಾಂಶುಪಾಲರ ಕೋಣೆಯಲ್ಲಿದ್ದ 3 ಸಾವಿರ ರೂ. ಕಳ್ಳವುಗೈದಿದ್ದಾನೆ. ಎರಡೂ ಶಾಲೆಗಳಲ್ಲೂ ಒಂದೇ ದಿನ ಕಳ್ಳತನ ನಡೆದಿದೆ. ಶಾಲೆಯ ಬಗ್ಗೆ ಸ್ಪಷ್ಟ ಮಾಹಿತಿ ಇರುವಾತನೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿದ್ದಾರೆ.