ಪುತ್ರನ ಬೆಟ್ಟಿಂಗ್ ಸಾಲ ತೀರಿಸಲು ಬಾಲಿವುಡ್ ನಟನ ಸಂಬಂಧಿ ಮನೆಯಲ್ಲಿ ಕಳವು; ಇಬ್ಬರು ಅಂದರ್

Mary
Published on

ಬೆಂಗಳೂರು: ಬಾಲಿವುಡ್ ನಟ ಬೊಮ್ಮಾನ್ ಇರಾನಿ ಸಂಬಂಧಿ ಮನೆಯಲ್ಲಿ ಚಿನ್ನಾಭರಣ, ನಗದು, ವಿದೇಶಿ ಕರೆನ್ಸಿ ಕಳವು ಮಾಡಿದ್ದ ಪ್ರಕರಣದಲ್ಲಿ ಅವರ ಮನೆಗೆಲಸದಾಕೆ ಹಾಗೂ ಆಕೆಯ ಪುತ್ರನನ್ನು ಹಲಸೂರು ಉಪವಿಭಾಗ ಪೊಲೀಸರು ಬಂಧಿಸಿದ್ದಾರೆ. ಕಾಡುಗೊಂಡನಹಳ್ಳಿ ನಿವಾಸಿ ಮೇರಿ ಅಲಿಸ್ (50) ಹಾಗೂ ಪುತ್ರ ಮೈಕಲ್ ವಿನ್ಸಂಟ್ (22) ಬಂಧಿತರು. ಆರೋಪಿಗಳಿಂದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಬ್ಬಾಸ್ ಅಲಿ ಅಲಿ ರಸ್ತೆಯಲ್ಲಿರುವ ಎಂಬೆಸ್ಸಿ ಕ್ರೌನ್ ಅಪಾರ್ಟ್‌ಮೆಂಟ್ ನಿವಾಸಿ ಬಾಲಿವುಡ್ ನಟ ಬೊಮನ್ ಇರಾನಿ ಅವರ ಸೋದರ ಸಂಬಂಧಿ ಖುರ್ಷೀದ್ ಇರಾನಿ ವಾಸವಿದ್ದಾರೆ. ಇವರ ಮನೆಯಲ್ಲಿ ಕಳೆದ 28 ವರ್ಷಗಳಿಂದ ಮೇರಿ ಅಲಿಸಾ ಕೆಲಸ ಮಾಡಿಕೊಂಡಿದ್ದಳು. ಈ ವೇಳೆ ಮನೆ ಮಾಲೀಕರ ನಂಬಿಕೆಗಳಿಸಿದ್ದು, ಆಕೆಗೆ ಮನೆಯಲ್ಲಿ ಓಡಾಟಕ್ಕೆ ಮುಕ್ತ ಅವಕಾಶ ನೀಡಲಾಗಿತ್ತು. ಖರ್ಷಿದ್ ಅವರು ನ. 29ರಂದು ಲಾಕರ್ ತೆಗೆದು ನೋಡಿದಾಗ 1.31 ಕೋಟಿ ರೂ. ಮೌಲ್ಯದ 100 ಗ್ರಾಂ ತೂಕದ ಒಂಬತ್ತು ಚಿನ್ನದ ಬಿಸ್ಕೆಟ್, 85 ಲಕ್ಷದ ರೂ. ನಗದು ಹಾಗೂ 11 ಲಕ್ಷ ರೂ. ಮೌಲ್ಯದ 15 ಸಾವಿರ ಯುಎಸ್ ಕರೆನ್ಸಿ ಕಳ್ಳತನವಾಗಿರುವುದು ಗೊತ್ತಾಗಿತ್ತು. ಮನೆಗೆಲಸಕ್ಕಿದ್ದ ಮೇರಿ ಕೃತ್ಯ ಎಸಗಿದ್ದಾಳೆ ಎಂದು ಆರೋಪಿಸಿ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಕುರಿತು ಹಲಸೂರು ಮತ್ತಯ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರ ತಂಡ ತನಿಖೆ ಕೈಗೊಂಡಿತ್ತು. ಕೃತ್ಯ ಬಳಿಕ ಮೇರಿಯನ್ನು ಬಂಧಿಸಲಾಗಿತ್ತು. ಕದ್ದ ಚಿನ್ನಾಭರಣ ಪುತ್ರನಿಗೆ ನೀಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಳು. ಆಕೆಯ ಪುತ್ರ ಮೈಕಲ್ ನಾಗವಾರಪಾಳ್ಯ ಮುಖ್ಯರಸ್ತೆ ಜ್ಯುವೆಲರಿ ಮಳಿಗೆಯಲ್ಲಿ ಚಿನ್ನಾಭರಣ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಕಾರ್ಯಾಚರಣೆ ನಡೆಸಿ, ಚಿನ್ನದ ಬಿಸ್ಕೆಟ್ ಸಮೇತ ಮೈಕಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುತ್ರನ ಬೆಟ್ಟಿಂಗ್ ಸಾಲ ತೀರಿಸಲು ಕೃತ್ಯ!: ಮೈಕಲ್ ವಿನ್ಸೆಂಟ್ ಪಿಯುಸಿ ವ್ಯಾಸಂಗ ಮಾಡಿದ್ದು, ಅನಿಮೇಷನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮೋಜಿನ ಜೀವನಕ್ಕೆ ಒಳಗಾಗಿದ್ದ ವಿನ್ಸೆಂಟ್, ಐಪಿಎಲ್ ಬೆಟ್ಟಿಂಗ್‌ನಲ್ಲಿ ಲಕ್ಷಾಂತರ ರೂ. ಸೋತು, ಸಾಲ ಮಾಡಿಕೊಂಡಿದ್ದ. ಈ ಸಾಲ ತೀರಿಸಲು ಹಣ ನೀಡುವಂತೆ ತಾಯಿಗೆ ಪೀಡಿಸಿದ್ದ. ಇದರಿಂದಾಗಿ ಮೇರಿ ತಾನು ಕೆಲಸ ಮಾಡುತ್ತಿದ್ದ ಖುರ್ಷಿದ್ ಇರಾನಿ ಅವರ ಮನೆಯಲ್ಲಿ ಚಿನ್ನದ ಬಿಸ್ಕೆಟ್ ಹಾಗೂ ಹಣವನ್ನು ಕದ್ದು ಪುತ್ರನಿಗೆ ನೀಡಿದ್ದಳು. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಹಲಸೂರು ಉಪವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net