ಚಿನ್ನದಂಗಡಿಯ ಮಾಲೀಕನ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್​ನಿಂದಲೇ ಕಳವು; ಕಳ್ಳತನ ಮಾಡಿದ್ದ ದಂಪತಿ ಪರಾರಿ!

crime
Published on

ಬೆಂಗಳೂರು: ಕೆಲಸಕ್ಕಿದ್ದ ಜ್ಯುವೆಲರಿ ಅಂಗಡಿ ಮಾಲೀಕರ ಮನೆಯಲ್ಲಿಯೇ 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ನೇಪಾಳಿ ದಂಪತಿ ಪರಾರಿಯಾಗಿರುವ ಪ್ರಕರಣ ಜಾಲಹಳ್ಳಿಯಲ್ಲಿ ನಡೆದಿದೆ. ನೇಪಾಳ ಮೂಲದ ಜಯಂತಿ(24), ಶಿವರಾಜ್(28) ಕಳವು ಮಾಡಿ ಪರಾರಿಯಾಗಿರುವ ದಂಪತಿ.

ಜಾಲಹಳ್ಳಿಯ ಶಾರದಾಂಬನಗರದಲ್ಲಿ ಜ್ಯುವೆಲರಿ ಮಾಲೀಕ ನರೇಶ್ ಕುಟುಂಬ ವಾಸವಾಗಿದ್ದು, ನ್ಯೂಬಿಇಎಲ್ ರಸ್ತೆಯಲ್ಲಿ ಇವರು ಗಣೇಶ್ ಜ್ಯುವೆಲರಿ ಎಂಬ ಹೆಸರಿನ ಅಂಗಡಿ ಇಟ್ಟುಕೊಂಡಿದ್ದಾರೆ. ಇವರ ಮನೆಯಲ್ಲಿ ಆರು ವರ್ಷಗಳಿಂದ ನೇಪಾಳ ಮೂಲದ ದಂಪತಿ ಕೆಲಸ ಮಾಡಿಕೊಂಡಿದ್ದು, ಇವರಿಗೆ ಒಂದು ಮಗುವಿದೆ.

ನೇಪಾಳಿ ದಂಪತಿ ಪೈಕಿ ಮಹಿಳೆ ಮನೆ ಕೆಲಸ ಮಾಡಿಕೊಂಡಿದ್ದರೆ, ಈಕೆಯ ಗಂಡ ಸೆಕ್ಯುರಿಟಿ ಗಾರ್ಡ್ ಆಗಿದ್ದನು. ನರೇಶ್ ಕುಟುಂಬ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಡಿ.28ರಿಂದ ಜ.1ರವರೆಗೆ ಮಡಿಕೇರಿಗೆ ಪ್ರವಾಸಕ್ಕೆ ತೆರಳಿತ್ತು. ಇದೇ ಸಮಯವನ್ನು ಕಾದಿದ್ದ ದಂಪತಿ ಡಿ.28-29ರ ಮಧ್ಯೆ ನಕಲಿ ಕೀ ಬಳಸಿ ಮಾಲೀಕರ ಮನೆಯ ಒಳಗೆ ನುಗ್ಗಿ ಸುಮಾರು 35 ಲಕ್ಷ ರೂ. ಮೌಲ್ಯದ 850 ಗ್ರಾಂ ಚಿನ್ನಾಭರಣಗಳನ್ನು ದೋಚಿಕೊಂಡು ತಮ್ಮ ಮಗುವಿನೊಂದಿಗೆ ಪರಾರಿಯಾಗಿದ್ದಾರೆ.

ನರೇಶ್ ಕುಟುಂಬ ಡಿ.31ರ ಮಧ್ಯರಾತ್ರಿ ಮನೆಗೆ ವಾಪಸಾದಾಗ ಕೆಲಸಕ್ಕಿದ್ದ ನೇಪಾಳಿ ದಂಪತಿ ನಾಪತ್ತೆಯಾಗಿರುವುದು ಗೊತ್ತಾಗಿತ್ತು. ಮನೆ ಬೀಗ ತೆಗೆದು ಒಳಗೆ ಹೋದಾಗ ಕಳ್ಳತನ ನಡೆದಿರುವುದು ಕಂಡು ಬಂದಿದೆ. ತಕ್ಷಣ ನರೇಶ್ ಅವರು ಜಾಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಎರಡು ವಿಶೇಷ ತಂಡವನ್ನು ರಚಿಸಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net