

ಬೆಂಗಳೂರು: ಸೂಟು-ಬೂಟು ಹಾಕೊಂಡು ಚಿನ್ನಾಭರಣ ಮಳಿಗೆಗಳಿಗೆ ಎಂಟ್ರಿಕೊಡುತ್ತಿದ್ದ ಯುವಕ ಮಾಡಬಾರದ್ದನ್ನು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ದೊಡ್ಡಬಳ್ಳಾಪುರ ಮೂಲದ ವಿಶಾಲ್ (25) ಬಂಧಿತ. ಆರೋಪಿಯು ಶೋಕಿ ಜೀವನ ಅಂಟಿಸಿಕೊಂಡಿದ್ದು, ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಆದರೂ ಲಕ್ಷಾಂತರ ರೂ. ಗಳಿಸುತ್ತಿದ್ದ. ಅದಕ್ಕಾಗಿ ಖತರ್ನಾಕ್ ಸಂಚು ರೂಪಿಸಿದ್ದ. ಅದರಂತೆ ತನ್ನನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದ. ಜ್ಯುವೆಲ್ಲರಿ ಮಳಿಗೆಗಳಿಗೆ ಹೋಗಿ, ತಾನು ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಎಂದು ಪರಿಚಯಿಸಿಕೊಂಡು ಚಿನ್ನಾಭರಣ ಖರೀದಿಸುವ ಸೋಗಿನಲ್ಲಿ ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದ.
ವಿನಾಯಕನಗರದಲ್ಲಿನ ಗಿರವಿ ಅಂಗಡಿಯಲ್ಲಿ ಚಿನ್ನಾಭರಣ ಮಾರಾಟಕ್ಕೆ ವಿಶಾಲ್ ಬಂದಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಾಗಲುರು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಪಿಗೆಹಳ್ಳಿ, ಕೊತ್ತನೂರು, ಮಾಗಡಿ ಪೊಲೀಸ್ ಠಾಣೆ ಹಾಗೂ ತೆಲಂಗಾಣದ ನಿಜಾಮಬಾದ್, ಆಂಧ್ರಪ್ರದೇಶದ ವಿಜಯವಾಡದಲ್ಲಿ ಒಟ್ಟು 6 ಪ್ರಕರಣಗಳು ಈತನ ವಿರುದ್ಧ ಪತ್ತೆಯಾಗಿವೆ.
ಆರೋಪಿಯಿಂದ 12.80 ಲಕ್ಷ ರೂ. ಮೌಲ್ಯದ 252 ಗ್ರಾಂ ಚಿನ್ನಾಭರಣ, 2 ಮೊಬೈಲ್ ಜಪ್ತಿ ಮಾಡಲಾಗಿದೆ. ಈತ ಹಿಂದೆಯೂ ಕಳ್ಳತನದಲ್ಲಿ ಭಾಗಿಯಾಗಿದ್ದ. ಜಾಮೀನಿನ ಮೇಲೆ ಜೈಲಿನಿಂದ ಹೊರಬಂದು ತನ್ನ ಚಾಳಿಯನ್ನು ಮುಂದುವರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.