ಇದು ಖತರ್ನಾಕ್​ ಜೋಡಿಯ ಕಹಾನಿ! ಯುವಕ-ಯುವತಿಯ ದುಷ್ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆ!

Theft JewelryStore
Published on

ಬೆಂಗಳೂರು: ಮುರುಗೇಶ್ ಪಾಳ್ಯ ಬಳಿಯ ನವರತನ್ ಜುವೆಲ್ಲರಿ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಯುವಕ-ಯುವತಿ ಮಾಡಬಾರದ್ದನ್ನು ಮಾಡಿ ಮಾಲೀಕರ ಕಣ್ಣೆದುರೇ ಸಿನಿಮೀಯ ರೀತಿ ಎಸ್ಕೇಪ್​ ಆಗಿದ್ದಾರೆ.

ನ. 10ರಂದು ಚಿನ್ನದ ಸರ ಖರೀದಿಸುವ ನೆಪದಲ್ಲಿ ಆಭರಣ ಮಳಿಗೆಗೆ ಚಾಲಾಕಿ ಜೋಡಿ ಬಂದಿತ್ತು. ಟ್ರಯಲ್ ನೋಡುವ ನೆಪದಲ್ಲಿ 40 ಗ್ರಾಂ ತೂಕದ ಚಿನ್ನದ ಸರವನ್ನು ಯುವತಿ ಕೊರಳಿಗೆ ಹಾಕಿಕೊಂಡು ಮಿರರ್​ ಮುಂದೆ ನಿಂತು ಕೆಲ ಕ್ಷಣ ನೋಡಿದಳು. ನಂತರ ಬ್ಯಾಗ್​ನಿಂದ ಹಣ ತೆಗೆದು ಅಂಗಡಿಯವನ ಮುಂದೆ ಎಣಿಸಿ ಕಡಿಮೆ ಇದೆ ಎಂದ ಆಕೆ, ಬಾಕಿ ಹಣಕ್ಕೆ ಎಟಿಎಂ ಕಾರ್ಡ್ ಸ್ವೈಪ್ ಮಾಡ್ತೀರಾ? ಎಂದೂ ಕೇಳಿದಳು.

ಯುವತಿ ಜತೆ ಬಂದಿದ್ದ ಯುವಕ ಬೈಕ್​ನ ಡಿಕ್ಕಿಯಲ್ಲಿ ಎಟಿಎಂ ಕಾರ್ಡ್ ಇದೆ. ಅದನ್ನು ತರುವೆ ಎಂದು ಅಂಗಡಿಯಿಂದ ಹೊರ ಬಂದ. ಈ ವೇಳೆ ಇನ್ನೊಂದು ಸರ ತೋರಿಸಿ ಎಂದ ಆಕೆ, ಅಂಗಡಿಯವನ ಗಮನ ಬೇರೆಡೆ ಸೆಳೆಯುತ್ತಿದ್ದಳು. ಅಷ್ಟೊತ್ತಿಗೆ ಎಟಿಎಂ ಕಾರ್ಡ್ ತರಲು ಹೋದ ವ್ಯಕ್ತಿ ಅಂಗಡಿ ಹೊರಗೆ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಟ್ರಯಲ್​ಗೆ ಪಡೆದ 40 ಗ್ರಾಂ ಚಿನ್ನದ ಸರದ ಜತೆ ಅಂಗಡಿಯಿಂದ ಹೊರ ಹೋದ ಯುವತಿ ಬೈಕ್​ ಹತ್ತಿ ಎಸ್ಕೇಪ್ ಆದಳು.

ಆಕೆ ಬೈಕ್​ ಹತ್ತಿ ಹೋಗುತ್ತಿದ್ದಂತೆ ಎಚ್ಚೆತ್ತ ಅಂಗಡಿಯವ ಹೊರ ಹೋಡಿದರೂ ಚಾಲಾಕಿ ಕಳ್ಳ ಜೋಡಿ ಸಿಗಲಿಲ್ಲ. ಆರೋಪಿಗಳ ಸಂಪೂರ್ಣ ಕೃತ್ಯ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜುವೆಲ್ಲರಿ ಶಾಪ್ ಮಾಲೀಕ ಜೀವನ್ ಭೀಮಾನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಘಟನೆ ಸಂಬಂಧ ಅರೋಪಿ ರಾಘವೇಂದ್ರ ಎಂಬಾತನನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net