

ವಿಜಯವಾಣಿ ಸುದ್ದಿಜಾಲ ಬೈಂದೂರು
ರಂಗಭೂಮಿ ಸಮಾಜಕ್ಕೆ ಹೊಸ ಸಂದೇಶ ನೀಡಿ, ಮನುಷ್ಯನ ಜೀವನ ರೂಪಿಸಲು ಮಾರ್ಗದರ್ಶನ ನೀಡುವುದಲ್ಲದೇ, ಲೋಪದೋಷ ತಿದ್ದಿಕೊಳ್ಳಲು ಸಹಕಾರಿ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಲಾವಣ್ಯ ಬೈಂದೂರು 48ನೇ ವಾರ್ಷಿಕೋತ್ಸವ ಹಾಗೂ ಮಾಜಿ ಶಾಸಕ ದಿ.ಕೆ.ಲಕ್ಷ್ಮೀನಾರಾಯಣ ಸ್ಮರಣಾರ್ಥ ರಂಗಪಂಚಮಿ -2025 ರಂಗೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ಮಕ್ಕಳಿಗೆ ಬಾಲ್ಯದಿಂದಲೇ ರಂಗಶಿಕ್ಷಣ ನೀಡುವುದು ಅಗತ್ಯ. ಭಾರತೀಯ ಕಲೆ ಮತ್ತು ಸಾಹಿತ್ಯ ತಮ್ಮ ಅಸ್ತಿತ್ವ ಕಾಯ್ದುಕೊಳ್ಳುವ ಗಟ್ಟಿ ಬೇರನ್ನು ಹೊಂದಿದೆ. ಜಿಲ್ಲೆಯ 90 ಶಾಲೆಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಬೇತಿ ನೀಡಲಾಗುತ್ತಿದೆ ಎಂದರು.
ಉತ್ತಮ ಹೈನುಗಾರ ರಾಜ್ಯ ಪ್ರಶಸ್ತಿ ಪುರಸ್ಕೃತ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಹಿರಿಯ ಮದ್ದಳೆಗಾರ ನಾರಾಯಣ ದೇವಾಡಿಗ ಮತ್ತು ಕೊಂಕಣಿ ರಂಗ ಕಲಾವಿದ ಜೋಸೆಫ್ ಫರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು. ಬಾಡ ಪ್ರವೀಣ್ ಶೆಟ್ಟಿ ಶುಭಾಶಂಸನೆಗೈದರು. ಎಸ್.ರಾಜು ಪೂಜಾರಿ, ರಾಜಾರಾಮ ಭಟ್, ಕೃಷ್ಣಯ್ಯ ಮದ್ದೋಡಿ, ಸತೀಶ ಶೆಟ್ಟಿ ಸೂರ‌್ಕುಂದ, ಭರತ್ ದೇವಾಡಿಗ, ರಂಗ ಎಸ್. ಇದ್ದರು. ರಾಜೇಶ ನಾಯ್ಕ ಸ್ವಾಗತಿಸಿ, ಕಾರ್ಯದರ್ಶಿ ಎಚ್.ವಿಶ್ವನಾಥ ಆಚಾರ್ಯ ವಂದಿಸಿದರು. ನಾಗರಾಜ ಪಿ. ನಿರೂಪಿಸಿದರು.