ಖಾಕಿ ಕಣ್ತಪ್ಪಿಸಿ ಮತ್ತೆ ಪರಾರಿಯಾದ ದರೋಡೆ ಆರೋಪಿ!!

Garuda Lead
Published on

ಓಡಿ ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ನಿರ್ಜನ ಪ್ರದೇಶದಲ್ಲಿ ತಲೆಮರೆಸಿಕೊಂಡ ಇಸಾಕ್​

ವಿಜಯವಾಣಿ ಸುದ್ದಿಜಾಲ ಉಡುಪಿ

ನೆಲಮಂಗಲದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ, ಗರುಡಾ ಗ್ಯಾಂಗ್​ನ ಸದಸ್ಯ ಇಸಾಕ್​ (27), ಮತ್ತೊಮ್ಮೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ನೆಲಮಂಗಲದ ಪೊಲೀಸರು ಮಂಗಳವಾರ ರಾತ್ರಿ ಮಣಿಪಾಲಕ್ಕೆ ಆಗಮಿಸಿ, ಇಸಾಕ್​ ಇದ್ದ ಕಾರನ್ನು ಸಿನಿಮೀಯ ರೀತಿಯಲ್ಲಿ ಚೇಸ್​ ಮಾಡಿದ್ದು, ಈ ವೇಳೆ ವೇಗವಾಗಿ ತನ್ನ ವಾಹನ ಚಾಲಿಯಿಸುತ್ತ ಹಲವು ವಾಹನಗಳಿಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದನು. ಘಟನೆಯಲ್ಲಿ ಇನ್​ಸ್ಪೆಕ್ಟರ್​ ಸಹಿತ ಐವರು ಪೊಲೀಸರು ಗಾಯಗೊಂಡಿದ್ದರು.

ನಿರ್ಜನ ಪ್ರದೇಶದಲ್ಲಿ ನಾಪತ್ತೆ

Garuda 2
ಆರೋಪಿ ಇಸಾಕ್​

ಪೊಲೀಸರ ಕಣ್ಣು ತಪ್ಪಿಸಿ ಮಣಿಪಾಲದಿಂದ ಸುಮಾರು 3 ಕಿ.ಮೀ. ದೂರ ಸಾಗಿದ ಬಳಿಕ ಆತನ ಕಾರ್​ ಟೈರ್​ ಪಂಕ್ಚರ್​ ಆಗಿದೆ. ಹೀಗಾಗಿ ಮಣ್ಣಪಳ್ಳದ ರಸ್ತೆಯಲ್ಲಿ (ವಿರುದ್ಧ ದಿಕ್ಕಿನಲ್ಲಿ) ತನ್ನ ಕಾರು ನಿಲ್ಲಿಸಿ, ಬಾಗಿಲು ತೆರೆದು ಬಲಭಾಗದಲ್ಲಿರುವ ನಿರ್ಜನ ಪ್ರದೇಶ (ಗುಡ್ಡ)ದತ್ತ ಓಡಿ ಹೋಗುತ್ತಿರುವುದು ಹಾಗೂ ಒಂದೆರಡು ನಿಮಿಷದ ಬಳಿಕ ಆ ಕಾರಿನಲ್ಲಿದ್ದ ಆತನ ಗೆಳತಿ, ಬುರ್ಕಾ ಧರಿಸಿದ್ದ ಸುಜೈನ್​ (23) ಮೊಬೈಲ್ ಟಾರ್ಚ್ ಬೆಳಕು ಮಾಡಿಕೊಂಡು ಓಡಿ ಹೋಗುತ್ತಿರುವ ದೃಶ್ಯವೂ ಸಹ ಸಮೀಪದ ಬೈಕ್​ ಶೆಡ್​ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪೊಲೀಸ್​ ತನಿಖೆ ತೀವ್ರ

ಇಸಾಕ್​ ಓಡಿ ಪರಾಯಾಗಿದ್ದರೂ ಸಹ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆತನ ಗೆಳತಿ ಸುಜೈನ್​ಳನ್ನು ಪೊಲೀಸರು ಮಂಗಳವಾರ ರಾತ್ರಿಯೇ ಬಂಧಿಸಿದ್ದಾರೆ. ಆರೋಪಿ ಇಸಾಕ್​ಗೆ ಸಹಕಾರ ನೀಡಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಸುಜೈನ್​, ಸುಳ್ಯ ಮೂಲದ ಕಾನೂನು ಪದವಿ ವಿದ್ಯಾರ್ಥಿನಿ. ಆಕೆಯ ಸಹೋದರಿಯ ಶಿಕ್ಷಣದ ಸಲುವಾಗಿ ಅವರ ತಾಯಿ ಮಣಿಪಾಲದ ವಸತಿ ಸಮುಚ್ಚಯದಲ್ಲಿ ಉಳಿದುಕೊಂಡಿದ್ದಳು ಎಂದು ಪೊಲೀಸ್​ ತನಿಖೆಯಲ್ಲಿ ತಿಳಿದುಬಂದಿದೆ.

ಯುವತಿಯ ತಾಯಿಯ ಬಂಧನ

ಮಣಿಪಾಲದಲ್ಲಿ ನೆಲೆಸಿರುವ ಕೇರಳದ ಕಾಸರಗೋಡಿನ ಮಾಸ್ತಿಕುಂಡು ನಿವಾಸಿ, ಬಂಧನಕ್ಕೊಳಗಾದ ಸುಜೈನ್​ಳ ತಾಯಿ ಫಾತಿಮಾ ನಜಾದ್​ (48)ಳನ್ನೂ ಮಣಿಪಾಲ ಪೊಲೀಸರು ಗುರುವಾರ ಬಂಧಿಸಿದ್ದು, ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಗಳಂತೆ ಆಕೆಯೂ ಪರಾರಿಯಾಗಲು ಯತ್ನಿಸಿದ್ದರಿಂದ ಹಾಗೂ ಮಾಹಿತಿ ಇದ್ದರೂ ಆರೋಪಿಗಳಿಗೆ ಸಹಕರಿಸಿದ್ದರಿಂದ ಫಾತಿಮಾಳಿಗೆ ನ್ಯಾಯಾಧೀಶರು 12 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ರಸ್ತೆಯಲ್ಲೇ ಇಸಾಕ್​ ಬಿಟ್ಟು ಹೋದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಎಸ್​ಐ ಸೋಮಶೇಖರ್​ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿಸಿರುವ ಪೊಲೀಸರು, ಇಸಾಕ್​ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇಸಾಕ್​ ವಿರುದ್ಧ ಇದೆ ಹಲವು ಪ್ರಕರಣ

ನಾವುಂದ ಮೂಲದ ಇಸಾಕ್​, ಮಂಗಳೂರಿನಲ್ಲಿ ವಾಸ್ತವ್ಯ ಮಾಡಿದ್ದನು. ಆತನ ವಿರುದ್ಧ ಬೆಂಗಳೂರು, ಕಾರ್ಕಳ, ಉಡುಪಿ ಸೇರಿದಂತೆ ಹಲವು ಪೊಲೀಸ್​ ಠಾಣೆಗಳಲ್ಲಿ ದರೋಡೆ, ದೊಂಬಿ, ದನ ಕಳ್ಳತನ ಪ್ರಕರಣ ದಾಖಲಾಗಿದೆ. ಕಾಪು ಗರುಡ ಗ್ಯಾಂಗ್​ನ ಸದಸ್ಯನಾಗಿರುವ ಆತ, 2024ರ ಮೇ 18ರಂದು ನಸುಕಿನ ವೇಳೆ ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗ್ಯಾಂಗ್​ವಾರ್​ನಲ್ಲಿಯೂ ಇದ್ದ ಎಂಬ ಶಂಕೆ ಪೊಲೀಸರಿಗಿತ್ತು. ಆತನ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿದ್ದನು.

ದರೋಡೆ ಪ್ರಕರಣದ ಪ್ರಮುಖ ಆರೋಪಿ

ನೆಲಮಂಗಲ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸ್ಥಳಿಯನೋರ್ವನನ್ನು ಅಪಹರಿಸಿ 40 ಲಕ್ಷ ರೂ. ದರೋಡೆ ಮಾಡಲಾಗಿತ್ತು. ಆ ತಂಡದಲ್ಲಿ ಇಸಾಕ್​ ಎರಡನೇ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದನು. ಆತನ ಬಂಧನಕ್ಕಾಗಿ ಬೆಂಗಳೂರಿನ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಮಾ.4ರಂದು ಮಣಿಪಾಲಕ್ಕೆ ಬಂದಿದ್ದರು. ಗೆಳತಿ ಸುಜೈನ್​ ಹಾಗೂ ಆಕೆಯ ಕುಟುಂಬ ಉಳಿದುಕೊಂಡಿದ್ದ ಮಣಿಪಾಲದ ಡಿಸಿ ಕಚೇರಿ ರಸ್ತೆ ಮಾರ್ಗದಲ್ಲಿರುವ ವಸತಿ ಸಮುಚ್ಚಯಕ್ಕೆ ಆತ ಬರುವ ಮಾಹಿತಿ ಪೊಲೀಸರಿಗೆ ದೊರಕಿತ್ತು. ಮಾದನಾಯಕನಹಳ್ಳಿ ಪೊಲೀಸ್​ ಠಾಣೆಯ ಎಸ್​ಐ ಸೋಮಶೇಖರ್​ ಮತ್ತು ಪೊಲೀಸ್​ ನಿರೀಕ್ಷಕ ನರೇಂದ್ರ ಬಾಬು ಹಾಗೂ ಸಿಬ್ಬಂದಿ ಮಣಿಪಾಲದಲ್ಲಿ ಕಾದು ಕುಳಿತಿದ್ದರು. ಈ ವೇಳೆ ಅಲ್ಲಿಗೆ ನಂಬರ್​ ಪ್ಲೇಟ್​ ಇಲ್ಲದ ಮಹೇಂದ್ರ ಥಾರ್​ ಕಾರಿನಲ್ಲಿ ಇಸಾಕ್​ ಬಂದಿದ್ದು, ಪೊಲೀಸರು ಸಿನಿಮೀಯ ರೀತಿಯಲ್ಲಿ ಆತನನ್ನು ಬಂಧಿಸುವಲ್ಲಿ ಯತ್ನಿಸಿದ್ದರು. ಆದರೆ, ಆತ ಮತ್ತೊಮ್ಮೆ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ಘಟನೆಗೆ ಸಂಬಂಧಿಸಿ ಮಣಿಪಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಗೆಳತಿಯನ್ನು ಈಗಾಗಲೇ ವಶಕ್ಕೆ ತೆಗೆದುಕೊಂಡಿದ್ದು, ಗುರುವಾರದಂದು ಆಕೆಯ ತಾಯಿಯನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಇಸಾಕ್​ ಪತ್ತೆಗೆ ವಿಶೇಷ ತಂಡ ರಚಿಸಲಾಗಿದ್ದು, ಶೀಘ್ರದಲ್ಲಿಯೇ ಆತನನ್ನೂ ಬಂಧಿಸುತ್ತೇವೆ. | ಡಾ.ಅರುಣಕುಮಾರ್​ ಕೆ. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net