

ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಸಿದ್ಧಿಯಾಗಿರುವ ಜಾನಪದ ಮತ್ತು ರಂಗ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯಗಳು ಹೆಚ್ಚಾಗಬೇಕು ಎಂದು ರೆಡ್ ಕ್ರಾಸ್ ರಾಜ್ಯ ಸಮಿತಿ ಸದಸ್ಯೆ ಡಾ.ರೇಣುಕಾದೇವಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಡಾ.ರಾಜ್ ಕುಮಾರ್‌ಜಿಲ್ಲಾ ರಂಗಮಂದಿರದಲ್ಲಿ ರಂಗವಾಹಿನಿ, ಕೊಂಬಿನ ಹೊನ್ನಯ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ, ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ, ರಾಜ್ಯ ಪ್ರಾಥಮಿಕ ಶಾಲಾ ಎಸ್ಸಿ/ಎಸ್ಟಿ ನೌಕರರ ಸಂಘದ ಬೆಳ್ಳಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಸಿಜಿಕೆ ಪ್ರಶಸ್ತಿ ಸಿ.ಎಸ್.ಕೃಷ್ಣಮೂರ್ತಿ ನೆನಪು ಕಾರ್ಯಕ್ರಮ ಹಾಗೂ ಪೂಲನ್‌ದೇವಿ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಸಿ.ಎನ್.ಕೃಷ್ಣಮೂರ್ತಿ ಅವರು ಎಲ್ಲ ಜನರನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಪ್ರಕೃತಿ ನಿಯಮವನ್ನು ಯಾರೂ ಅಳಿಸಲು ಸಾಧ್ಯವಿಲ್ಲ. ಅವರು ನಡೆದು ಬಂದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ತಮ್ಮ ವೃತ್ತಿ, ಹಲವು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಅವರು, ರಂಗ ಭೂಮಿಯಲ್ಲೂ ಸಾಕಷ್ಟು ತೊಡಗಿಸಿಕೊಂಡು ಹಲವಾರು ಪಾತ್ರಗಳಲ್ಲಿ ಅಭಿನಯಿಸಿದ್ದರು ಎಂದು ಹೇಳಿದರು.
ಕಲೆ ಬದುಕಿಗೆ ಎಷ್ಟು ಮುಖ್ಯ ಎಂಬುದನ್ನು ಸಿ.ಎಸ್.ಕೃಷ್ಣಮೂರ್ತಿ ತೋರಿಸಿಕೊಟ್ಟರು. ಜಾನಪದದ ತವರೂರು ಎಂದು ಕರೆಯುವ ನಮ್ಮ ಜಿಲ್ಲೆಯಲ್ಲಿ ಜಾನಪದ ಕಲೆ ನಶಿಸಿ ಹೋಗುತ್ತಿರುವುದು ಅತ್ಯಂತ ದುರಂತ. ಶಾಲಾ ಕಾಲೇಜು ಹಂತದಲ್ಲಿ ಜಾನಪದ ಮತ್ತು ರಂಗ ಶಿಕ್ಷಣವನ್ನು ಕಡ್ಡಾಯಗೊಳಿಸಿ ಜಾನಪದ ಮತ್ತು ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸುವ ಕೆಲಸ ಹೆಚ್ಚಾಗಬೇಕು ಎಂದರು.
ಸೆಸ್ಕ್ ಇಇ ಆರ್.ವಸಂತ್‌ಕುಮಾರ್, ನಗರಸಭಾ ಸದಸ್ಯೆ ಚಿನ್ನಮ್ಮ, ರಂಗಕರ್ಮಿ ಕೆ.ಆರ್.ಗೋಪಾಲಕೃಷ್ಣ, ನೇತ್ರಾವತಿ ಕೃಷ್ಣಮೂರ್ತಿ, ಮುಖಂಡ ಸಿದ್ದಯ್ಯ, ಸೆಸ್ಕ್ ಲೆಕ್ಕಾಧಿಕಾರಿ ಎನ್.ಮಹೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಮಾದಪ್ಪ, ಮಹದೇವಸ್ವಾಮಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಸಿ.ಎನ್.ಸಂಪತ್ ಕುಮಾರ್, ರವಿಚಂದ್ರ ಪ್ರಸಾದ್ ಇದ್ದರು.
ಸ್ವಾಭಿಮಾನದ ಕಥೆ: ಉತ್ತರಪ್ರದೇಶ ರಾಜ್ಯದ ಗ್ರಾಮೀಣ ಭಾಗದ ಬಡ ಕುಟುಂಬದಲ್ಲಿ 1963 ರಲ್ಲಿ ಜನಿಸಿ ಬದುಕಿದಷ್ಟು ದಿನವೂ ಬದುಕಿಗಾಗಿ ಹೋರಾಟ ನಡೆಸಿದ ಸ್ವಾಭಿಮಾನ ಮತ್ತು ಸೇಡಿನ ಪೂಲನ್‌ದೇವಿ ಕಥೆ ರಂಗದ ಮೇಲೆ ಪ್ರದರ್ಶನವಾಯಿತು. ತನ್ನ 11 ವಯಸ್ಸಿನಲ್ಲಿ ಮದುವೆಯಾಗಿ, ದೌರ್ಜನ್ಯಕ್ಕೆ ಒಳಗಾಗಿ, ಡಕಾಯಿತ ಹಾದಿಯನ್ನು ಹಿಡಿದು, ಸರ್ಕಾರಕ್ಕೆ ಶರಣಾಗಿ, ಜೈಲಿನಿಂದ ಬಿಡುಗಡೆಗೊಂಡ ನಂತರ ರಾಜಕೀಯಕ್ಕೆ ಪ್ರವೇಶ ಪಡೆದ ಸಂಕಷ್ಟದ ಪೂಲನ್‌ದೇವಿ ಬದುಕಿನ ಹಾದಿಯನ್ನು ರಂಗಪಯಣ ತಂಡ ಮನೋಜ್ಞವಾಗಿ ಪ್ರಸ್ತುತ ಪಡಿಸಿದರು. ನಾಟಕ ನೋಡಲು ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು.