

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೋರಾಟಗಾರರ ಸಂಖ್ಯೆ ಕಡಿಮೆಯಾಗಿದೆ. ಹಿಂದಿನ ಹೋರಾಟಗಾರರ ಬಗ್ಗೆ ಯುವ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಭಿಪ್ರಾಯಿಸಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕನ್ನಡಪರ ಹೋರಾಟಗಾರ ಪಾಲನೇತ್ರ ಅವರ ಅಭಿನಂದನಾ ಸಮಾರಂಭದಲ್ಲಿ ‘ಕನ್ನಡ ಜಂಗಮ’ ಎಂಬ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಅನೇಕ ಹೋರಾಟಗಾರರು ತಮ್ಮ ಮನೆ, ಸಂಸಾರ, ಸ್ವಂತ ಕೆಲಸಗಳನ್ನು ಬದಿಗಿಟ್ಟು ನಾಡು ನುಡಿಯ ಬಗ್ಗೆ ಹೋರಾಟಗಳನ್ನು ಮಾಡುತ್ತಿದ್ದರು. ಅಂತಹ ಹೋರಾಟಗಾರರಲ್ಲಿ ಪಾಲನೇತ್ರ ಕೂಡಾ ಒಬ್ಬರು. ಕಳೆದ ನಾಲ್ಕು ದಶಕಗಳಿಂದ ಕೇವಲ ಹೋರಾಟವನ್ನು ಮೈಗೂಡಿಸಿಕೊಂಡಿರುವ ಪಾಲನೇತ್ರ ಹೋರಾಟ ಒಂದು ಭಾಗ ಸಮಯವನ್ನು ಸಂಸಾರಕ್ಕೆ ನೀಡಿದ್ದರೆ ನಗರದ ಶ್ರೀಮಂತರ ಪಟ್ಟಿಯಲ್ಲಿ ಅವರ ಹೆಸರು ಇರುತ್ತಿತ್ತು. ಆದರೆ ಅಂದಿನಿಂದ ಇಂದಿನವರೆಗೆ ಪಾಲನೇತ್ರ ಒಂದೇ ರೀತಿಯಲ್ಲಿದ್ದಾರೆ. ತಾಯಿ ಭುವನೇಶ್ವರಿ, ಕನ್ನಡವೇ ಅವರ ಉಸಿರು, ಹೆಸರು ಮತ್ತು ತಾಯಿ ಎಂದು ಪೂಜಿಸಿಕೊಂಡು ಬಂದಿದ್ದಾರೆ. ಪಾಲನೇತ್ರ ಅವರ ಸಲಹೆ, ಮನವಿಗಳಿಂದಲೇ ನಾನು ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾದ ಬಳಿಕೆ ರೈಲ್ವೇ ಇಲಾಖೆ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲು ಸರ್ಕಾರ ಆದೇಶ ಮಾಡುಂವತಾಯಿತು. ಸಂಸತ್ ಭವನದ ಆವರಣದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವ, ಬಸವಣ್ಣನವರ ಜಯಂತಿ ಕಾರ್ಯಕ್ರಮಗಳನ್ನು ಸರ್ಕಾರದಿಂದ ಆಚರಿಸಲು ಪಾಲನೇತ್ರ ಸಲಹೆ ಕಾರಣವಾಗಿದೆ. ನಾಡಿನ ಎಲ್ಲ ಮಠಾಧೀಶರೊಂದಿಗೆ ಸಂಪರ್ಕವಿರುವ ಪಾಲನೇತ್ರ ಅವರ ಅಭಿನಂದನಾ ಗ್ರಂಥ ಮುಂದಿನ ಪೀಳಿಗೆಗೆ ಉತ್ತಮ ಆಕರ ಎಂದು ಸೋಮಣ್ಣ ವಿವರಿಸಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಭಿನಂದನಾ ಸಮಿತಿ ವತಿಯಿಂದ ಪಾಲನೇತ್ರ ದಂಪತಿಗಳನ್ನು ಸನ್ಮಾನಿಸಿದರು. ಇದೇ ವೇಳೆ ಕನ್ನಡಪರ ಹೋರಾಟ ಮಾಡಿದ ವಿವಿಧ 10 ಹೋರಾಟಗಾರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕನಕಪುರ ದೇಗುಲ ಮಠದ ಶ್ರೀಚನ್ನಬಸವ ಸ್ವಾಮೀಜಿ, ನೆಲಮಂಗಲದ ಬಸವಣ್ಣದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ, ಅಭಿನಂದನಾ ಸಮಿತಿ ಅಧ್ಯಕ್ಷರಾದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ, ಕಾರ್ಯಾಧ್ಯಕ್ಷ ರೇಣುಕಾ ಪ್ರಸನ್ನ, ಅಭಿನಂದನಾ ಗ್ರಂಥದ ಸಂಪಾದಕ ಬೈರಮಂಗಲ ರಾಮೇಗೌಡ್ರು, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.