ಕಾಸರಗೋಡು: ಪತ್ನಿ ಹಾಗೂ ಮೂರು ಮಕ್ಕಳಿರುವ ಪುರುಷನ ಜತೆ 19ರ ಹರೆಯದ ಯುವತಿ ಪರಾರಿಯಾಗಿದ್ದು, ಯುವತಿ ಪಾಲಕರು ಹಾಗೂ ಪುರುಷನ ಮನೆಯವರ ಸಮ್ಮತಿಯೊಂದಿಗೆ ಕೊನೆಗೂ ಪ್ರಿಯತಮನ ಜತೆಗೆ ಯುವತಿ ತೆರಳುವ ಮೂಲಕ ನಾಟಕೀಯ ಅಂತ್ಯ ಕಂಡಿದೆ.
ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾಟೆಕಲ್ಲಿನಲ್ಲಿ ಘಟನೆ ನಡೆದಿದ್ದು ಇಲ್ಲಿನ ನಿವಾಸಿ ಯುವಕ ಹಾಗೂ ನರ್ಸಿಂಗ್ ಟ್ರೈನಿಯಾಗಿರುವ ಯುವತಿ ಎರಡು ದಿನಗಳ ಹಿಂದೆ ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಯುವತಿಯನ್ನು ಹುಡುಕಾಡಿದಾಗ ಆಕೆ ಯುವಕನ ಸಂಬಂಧಿಕರ ಮನೆಯಲ್ಲಿರುವುದಾಗಿ ಮಾಹಿತಿ ಲಭಿಸಿತ್ತು. ಅಲ್ಲಿಗೆ ತೆರಳಿದ ಪೊಲೀಸರು ಜೋಡಿಯನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ತಾನು ಪ್ರಿಯತಮನೊಂದಿಗೆ ತೆರಳುವುದಾಗಿ ತಿಳಿಸಿದ್ದಾಳೆ. ಯುವತಿ ಪೊಲೀಸರಲ್ಲೂ ಇದೇ ಹೇಳಿಕೆ ನೀಡಿದ್ದು, ಒಂದಕ್ಕಿಂತ ಹೆಚ್ಚಿನ ವಿವಾಹ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದೂ ತಿಳಿಸಿದ್ದಳು. ನಂತರ ಪೊಲೀಸರು ಪಾಲಕರನ್ನು ಠಾಣೆಗೆ ಕರೆಸಿ ಅವರಿಂದ ಮಾಹಿತಿ ಕೇಳಿದಾಗ ಪ್ರಿಯತಮನ ಜತೆ ತೆರಳುವುದಾದಲ್ಲಿ ತಮ್ಮ ವಿರೋಧವಿಲ್ಲ ಎಂದು ತಿಳಿಸಿದ್ದಾರೆನ್ನಲಾಗಿದೆ. ಯುವಕನ ಅಭಿಪ್ರಾಯ ಕೇಳಿದಾಗ ತಾನು ಈಗಾಗಲೇ ವಿವಾಹಿತನಾಗಿ ಮಕ್ಕಳಿದ್ದು, ಪತ್ನಿಯ ಸಮ್ಮತಿಯೊಂದಿಗೇ ಯುವತಿಯನ್ನು ಮದುವೆಯಾಗಿ ಮನೆಗೆ ಕರೆದೊಯ್ಯುತ್ತಿರುವುದಾಗಿ ತಿಳಿಸಿದ್ದಾನೆ.