

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಬಹು ಬೇಡಿಕೆಯ ಇಂದಿರಾ ಕ್ಯಾಂಟೀನ್ ಕಾಮಗಾರಿ ಭರದಿಂದ ನಡೆಯುತ್ತಿದ್ದು ಮುಂದಿನ ಒಂದು ತಿಂಗಳಲ್ಲಿ ಸೇವೆ ಪ್ರಾರಂಭಿಸುವ ನಿರೀಕ್ಷೆ ಇದೆ.
ಬೆಳ್ತಂಗಡಿಯಲ್ಲಿ 2017ರಿಂದಲೇ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಪ್ರಯತ್ನಗಳು ನಡೆಯುತ್ತಿದ್ದರೂ, ನಾನಾ ಕಾರಣದಿಂದ ದಿನ ಕೂಡಿ ಬಂದಿರಲಿಲ್ಲ. ಬೆಳ್ತಂಗಡಿ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಶೌಚಗೃಹದ ಹಿಂಬದಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ 2017ರಲ್ಲಿ ಅಡಿಪಾಯ ಹಾಕಲಾಗಿತ್ತು. ಆದರೆ ಸಾರ್ವಜನಿಕರಿಂದ ಆಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಾಮಗಾರಿ ಮುಂದುವರೆಯಲಿಲ್ಲ. ಮತ್ತೊಂದೆಡೆ ಅದೇ ಸ್ಥಳವನ್ನು ಕೆಎಸ್ಸಾರ್ಟಿಸಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಗುರುತಿಸಿದ ಕಾರಣ ಸ್ಥಳ ಬದಲಾವಣೆ ಅನಿವಾರ್ಯವಾಯಿತು.
ಬಳಿಕ ಬೇರೆ-ಬೇರೆ ಸ್ಥಳಗಳನ್ನು ಪರಿಶೀಲಿಸಿ ಕೊನೆಗೆ ಮಿನಿ ವಿಧಾನಸೌಧದ ಆವರಣದ ಒಂದು ಬದಿ, ಕ್ಯಾಂಟೀನ್ ನಿರ್ಮಿಸಲು ತೀರ್ಮಾನಿಸಲಾಯಿತು. ಆದರೆ ಇದಕ್ಕೂ ತಾಂತ್ರಿಕ ತೊಂದರೆಗಳು ಎದುರಾಯಿತು. ಹೀಗೆ ಒಂದಲ್ಲ ಒಂದು ಸಮಸ್ಯೆಯಿಂದ ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಯೋಗ ಕೂಡಿಬಂದಿರಲಿಲ್ಲ.
ಅಂಬೇಡ್ಕರ್ ಭವನದ ಬಳಿ ಸ್ಥಳ ನಿಗದಿ
ರಾಜ್ಯದಲ್ಲಿ ಒಂದನೇ ಹಂತದಲ್ಲಿ ಬಾಕಿ ಉಳಿದಿದ್ದ ಇಂದಿರಾ ಕ್ಯಾಂಟೀನ್ಗಳ ಪೈಕಿ ಬೆಳ್ತಂಗಡಿ ನಗರ ಪಂಚಾಯಿತಿಯೂ ಒಂದಾಗಿತ್ತು. ಎರಡನೇ ಹಂತದಲ್ಲಿ ನಿರ್ಮಿಸಬೇಕೆಂಬ ಒತ್ತಡ ದ.ಕ. ಜಿಲ್ಲಾಧಿಕಾರಿ ಆದೇಶದಲ್ಲಿತ್ತು. ಅದರಂತೆ ಎಲ್ಲೆಡೆ ಸ್ಥಳ ನಿಗದಿಪಡಿಸಿ ಕೊನೆಗೆ ಅಂಬೇಡ್ಕರ್ ಭವನದ ಸಮೀಪ ಸಮಾಜ ಕಲ್ಯಾಣ ಇಲಾಖೆ ಸಂಬಂಧಪಟ್ಟ 13 ಸೆಂಟ್ಸ್ ಸ್ಥಳದಲ್ಲಿ 8 ಸೆಂಟ್ಸ್ ಜಾಗವನ್ನು ಇಂದಿರಾ ಕ್ಯಾಂಟೀನ್ಗೆ ನಿಗದಿಪಡಿಸಲಾಯಿತು.
ಕಳೆದ ಎರಡು ತಿಂಗಳ ಹಿಂದೆ ಇದರ ಕಾಮಗಾರಿ ಆರಂಭವಾಗಿದ್ದು ಹೊರಭಾಗದ ಹೆಚ್ಚಿನ ಕೆಲಸಗಳು ಪೂರ್ಣಗೊಂಡಿವೆ. ಕಟ್ಟಡದ ಒಳಭಾಗದ ಕಾಮಗಾರಿಗಳು ನಡೆಯುತ್ತಿವೆ. ಈ ಕಾಮಗಾರಿಗಳು ಪೂರ್ಣಗೊಂಡ ಕೂಡಲೇ ಬೆಳ್ತಂಗಡಿಯಲ್ಲೂ ಇಂದಿರಾ ಕ್ಯಾಂಟೀನ್ ತನ್ನ ಸೇವೆ ಆರಂಭಿಸಲಿದೆ.
ಅಡುಗೆ ಕೋಣೆಯೂ ಇರಲಿದೆ
ಹೆಚ್ಚಿನ ಇಂದಿರಾ ಕ್ಯಾಂಟೀನ್ಗಳನ್ನು ಅಡುಗೆ ಕೋಣೆ ರಹಿತವಾಗಿ ನಿರ್ಮಿಸಲಾಗುತ್ತದೆ. ಗ್ರಾಹಕರಿಗೆ ಬಿಸಿಯಾದ ಆಹಾರ ನೀಡುವ ಉದ್ದೇಶದಿಂದ ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್ನಲ್ಲಿ ಅಡುಗೆ ಕೋಣೆಯೂ ನಿರ್ಮಾಣವಾಗಲಿದೆ. ಆಹಾರವನ್ನು ಅಲ್ಲೇ ಸಿದ್ಧಪಡಿಸಿ ನೀಡುವ ಉದ್ದೇಶವಾಗಿದ್ದು ನಿಂತು ಹಾಗೂ ಕುಳಿತುಕೊಂಡು ಆಹಾರ ಸೇವಿಸಲು ವ್ಯವಸ್ಥೆ ಕಲ್ಪಿಸಲಾಗುವುದು. ಜತೆಗೆ ಶೌಚಗೃಹದ ವ್ಯವಸ್ಥೆಯೂ ಇರಲಿದೆ.
ದಿನಕ್ಕೆ 1500 ಪ್ಲೇಟ್
ಬೆಳಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಮೂರು ಹೊತ್ತು ಆಹಾರ ವ್ಯವಸ್ಥೆ ಇರಲಿದೆ. ಸ್ಥಳೀಯ ತಿಂಡಿಗಳಿಗೆ ವಿಶೇಷ ಆದ್ಯತೆ ನೀಡುವ ಉದ್ದೇಶದಿಂದ ನೀರು ದೋಸೆ, ಇಡ್ಲಿ, ಬನ್ಸ್ ಮೊದಲಾದ ತಿಂಡಿಗಳಲ್ಲದೆ ಊಟ ಇರಲಿದೆ. ಪ್ರತಿ ಪ್ಲೇಟ್ಗೆ 10 ರೂ. ದರ ಇರಲಿದ್ದು ಮೂರು ಹೊತ್ತು ತಲಾ 500 ಪ್ಲೇಟ್ನಂತೆ 1,500 ಪ್ಲೇಟ್ ಆಹಾರ ಒದಗಿಸುವ ಗುರಿ ಇದೆ.
ಒಟ್ಟು 800 ಚದರ ಅಡಿ ವಿಸ್ತೀರ್ಣದಲ್ಲಿ ಇಂದಿರಾ ಕ್ಯಾಂಟೀನ್ ರಚನೆಯಾಗುತ್ತಿದ್ದು ಬಾಹ್ಯ ವಿನ್ಯಾಸ ಪೂರ್ಣಗೊಂಡಿದೆ. ಒಳಭಾಗದ ಕೆಲಸಗಳು ನಡೆಯುತ್ತಿದ್ದು ಶೀಘ್ರವೇ ಸೇವೆಗೆ ತೆರೆದುಕೊಳ್ಳಲಿದೆ. ರಾಜೇಶ್, ಬೆಳ್ತಂಗಡಿ ಪಪಂ ಮುಖ್ಯಾಧಿಕಾರಿ https://www.vijayavani.net/sampya-jatrotsava https://www.vijayavani.net/14th-yakshadhruva-yaksha-celebration