

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಸಮಿತಿ ತೊಡಗಿಸಿಕೊಂಡು ಜನ ಸೇವೆ ಮಾಡುತ್ತಿರುವ ಕಾರ್ಯ ಅನುಗ್ರಹಕ್ಕೆ ಪಾತ್ರವಾಗಿದೆ. ಸಹಾಯ ಸ್ವೀಕರಿಸಿದ ವವಿದ್ಯಾರ್ಥಿಗಳು ಸಾಧನೆಗೈದು ಸಮಾಜದ ಋಣವನ್ನು ತೀರಸಬೇಕು ಎಂದು ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದ ಅರ್ಚಕ ವಿಷ್ಣುಮೂರ್ತಿ ಉಪಾಧ್ಯಾಯ ಹೇಳಿದರು.
ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನ, ಜನಾರ್ದನ ಜನಕಲ್ಯಾಣ ಸೇವಾ ಸಮಿತಿ ವತಿಯಿಂದ ಎರ್ಮಾಳಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿ, ಭಾರತದ ಪ್ರಧಾನ ಶಕ್ತಿಯೇ ಯುವಸಮುದಾಯವಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ತೆಂಕ ಹಾಗೂ ಬಡಾ ಗ್ರಾಮದ 100 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಸಿಎ ಉತ್ತಿರ್ಣರಾದ ಅನುಷಾ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ತೆಂಕ ಗ್ರಾಪಂ ಅಧ್ಯಕ್ಷೆ ಸುರೇಖಾ, ಜನ ಕಲ್ಯಾಣ ಸೇವಾ ಸಮಿತಿ ಉಪಾಧ್ಯಕ್ಷ ರತ್ನಾಕರ್ ಶೆಟ್ಟಿ, ಎರ್ಮಾಳು ಶಶಿಧರ್ ಕೆ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಯಶೋಧರ್ ಶೆಟ್ಟಿ, ಕೋಶಾಧಿಕಾರಿ ರಾಕೇಶ್ ಎಲ್.ಶೆಟ್ಟಿ, ಮಹಿಳಾ ಮಂಡಳಿ ಅಧ್ಯಕ್ಷೆ ಜ್ಯೋತಿ ಶೆಟ್ಟಿ, ಸಂತೋಷ್ ಶೆಟ್ಟಿ ಬರ್ಪಾಣಿ ಉಪಸ್ಥಿತರಿದ್ದರು. ಜನಾರ್ದನ ಜನ ಕಲ್ಯಾಣ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಜಿ.ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಂತೋಷ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು.