ಚತುಷ್ಪಥ ಪ್ರಥಮ ಹಂತ ಪೂರ್ಣ: ತೊಕ್ಕೊಟ್ಟು-ಚೆಂಬುಗುಡ್ಡೆ ಕಾಮಗಾರಿಗೆ ವೇಗ : ವಾಹನ ನಿಲುಗಡೆಗೆ ಪರಿಹಾರ ಅಗತ್ಯ

New Project
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಸ್ಥಳೀಯ ಶಾಸಕರ ಕನಸಿನ ಯೋಜನೆ, ಸಾರ್ವಜನಿಕರ ಬಹುವರ್ಷಗಳ ಬೇಡಿಕೆಯಾಗಿದ್ದ ತೊಕ್ಕೊಟ್ಟಿನಿಂದ ಚೆಂಬುಗುಡ್ಡೆವರೆಗಿನ ಚತುಷ್ಪಥ ರಸ್ತೆ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡಿದೆ, ಈ ನಡುವೆ ರಸ್ತೆಯಲ್ಲೇ ವಾಹನ ನಿಲುಗಡೆ ಆರಂಭಗೊಂಡಿದ್ದು ಇದಕ್ಕೂ ಪರಿಹಾರ ಅಗತ್ಯ ಎನ್ನುವ ಆಗ್ರಹ ಸಾರ್ವಜನಿಕರದ್ದಾಗಿದೆ.

ಐದು ವರ್ಷಗಳ ಹಿಂದೆಯೇ ತೊಕ್ಕೊಟ್ಟಿನಿಂದ ಯೆನೆಪೋಯ ಆಸ್ಪತ್ರೆವರೆಗಿನ ರಸ್ತೆ ಚತುಷ್ಪಥ ಕಾಮಗಾರಿಗೆ 14 ಕೋಟಿ ರೂ.ಅನುದಾನ ಬಿಡುಗಡೆಗೊಳಿಸಿ 2020ರ ಜನವರಿ 31ರಂದು ಶಿಲಾನ್ಯಾಸ ನಡೆಸಲಾಗಿತ್ತು.

ಹಲವು ಅಡ್ಡಿ

ಕಾಮಗಾರಿ ಆರಂಭವಾದ ಕೆಲವೇ ದಿನಗಳಲ್ಲಿ ಕರೊನಾ ಲಾಕ್‌ಡೌನ್, ನಂತರದ ದಿನಗಳಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಮೆಸ್ಕಾಂ ಮೀನಮೇಷ ಎಣಿಸಿದರೆ, ರಸ್ತೆಬದಿ ಮರ ಕಡಿಯಲು ಅರಣ್ಯ ಇಲಾಖೆ ಅಡ್ಡಿಯಾಯಿತು. ನೀರಿನ ಪೈಪ್‌ಲೈನ್ ಅಳವಡಿಕೆಗೂ ಸಮಸ್ಯೆ ಎದುರಾಯಿತು. ಎಲ್ಲ ಮುಗಿದ ಬಳಿಕ ಅಲ್ಲಲ್ಲಿ ಜಾಗದ ತಕರಾರಿಂದ ಕಾಮಗಾರಿಗೆ ಅಡ್ಡಿಯಾಯಿತು. ಕಾಮಗಾರಿ ವಿಚಾರದಲ್ಲಿ ಅರಣ್ಯ, ಲೋಕೋಪಯೋಗಿ, ಕೆಯುಡಬ್ಲ್ಯುಎಸ್, ಮೆಸ್ಕಾಂ ನಡುವಿನ ಹೊಂದಾಣಿಕೆ ಕೊರತೆಯೂ ಎದುರಾಗಿತ್ತು.

ಹೆಚ್ಚುವರಿ ಅನುದಾನ ಬಿಡುಗಡೆ

ಇದೆಲ್ಲ ಮುಗಿದ ಬಳಿಕ ಕಳೆದ ವರ್ಷ ನವೆಂಬರ್ 28ರಂದು ಸ್ಪೀಕರ್ ಯು.ಟಿ.ಖಾದರ್ ಹೆಚ್ಚುವರಿಯಾಗಿ 25 ಕೋಟಿ ರೂ.ಅನುದಾನದಲ್ಲಿ ಕಾಮಗಾರಿಗೆ ಮತ್ತೊಮ್ಮೆ ಚಾಲನೆ ನೀಡಿದ್ದಲ್ಲದೆ ರಸ್ತೆಗೆ ತಾಗಿಕೊಂಡಿರುವ ಖಾಸಗಿ ಕಟ್ಟಡಗಳ ತೆರವಿಗೆ ಕಟ್ಟುನಿಟ್ಟಿನ ಆದೇಶ ಅಧಿಕಾರಿಗಳಿಗೆ ನೀಡಿದ್ದರು. ಅದರಂತೆ ಶರವೇಗದಲ್ಲಿ ಮೊದಲ ಹಂತದ ಕಾಮಗಾರಿ ಆರಂಭಗೊಂಡಿತ್ತು. ಈ ಸಂದರ್ಭ ಚೆಂಬುಗುಡ್ಡೆಯಿಂದ ತೊಕ್ಕೊಟ್ಟುವರೆಗಿನ ರಸ್ತೆಗೆ ಒಂದು ಬದಿ ತಾಗಿಕೊಂಡಿದ್ದ ಮರಗಳಿಂದಾವೃತ ಗುಡ್ಡ ಸವಾಲಾಗಿತ್ತು. ಇವೆಲ್ಲವನ್ನೂ ಮೀರಿ ನಿಂತು ಮೊದಲ ಹಂತದ ಕಾಮಗಾರಿ ಮುಗಿದಿದೆ. ಇನ್ನು ಒಳಚರಂಡಿ, ಅದರ ಮೇಲ್ಭಾಗದಲ್ಲಿ ಫುಟ್‌ಪಾತ್, ಜಂಕ್ಷನ್‌ನಲ್ಲಿ ಆಟೋರಿಕ್ಷಾ ಪಾರ್ಕ್ ನಿರ್ಮಾಣ ಆಗಬೇಕಿದೆ.

ತೊಕ್ಕೊಟ್ಟು-ಚೆಂಬುಗುಡ್ಡೆ ಹಿಂದಿನ ರಸ್ತೆ.
ತೊಕ್ಕೊಟ್ಟು-ಚೆಂಬುಗುಡ್ಡೆ ಹಿಂದಿನ ರಸ್ತೆ.

ರಸ್ತೆಯಲ್ಲಿ ವಾಹನ ನಿಲುಗಡೆ

ಉಳ್ಳಾಲ ಭಾಗದಲ್ಲಿ ರಸ್ತೆ ಅಗಲೀಕರಣಗೊಂಡ ಬಳಿಕ ಸಾರ್ವಜನಿಕರಿಗೆ ತೊಂದರೆ ಕಡಿಮೆಯಾಗುವ ಬದಲು ಹೆಚ್ಚಾಗುವುದು ಸಾಮಾನ್ಯವಾಗಿದೆ. ಯಾಕೆಂದರೆ ರಸ್ತೆಬದಿ ಇರುವ ಖಾಸಗಿ ಕಟ್ಟಡಗಳಿಗೆ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲದ ಕಾರಣ ರಸ್ತೆಬದಿಯೇ ವಾಹನ ನಿಲುಗಡೆ ಮಾಡುವುದು ಸಾಮಾನ್ಯ. ರಸ್ತೆ ಅಗಲೀಕರಣಗೊಂಡ ಬಳಿಕ ರಸ್ತೆಯಲ್ಲೇ ನಿಲುಗಡೆ ಮಾಡಲಾಗುತ್ತಿದೆ. ಇಂಥ ಪರಿಸ್ಥಿತಿ ದೇರಳಕಟ್ಟೆ, ಯೆನೆಪೋಯ ಆಸ್ಪತ್ರೆ ಮುಂಭಾಗದಲ್ಲಿದ್ದು, ಇದೀಗ ತೊಕ್ಕೊಟ್ಟಿನಲ್ಲೂ ಆರಂಭಗೊಂಡಿದೆ. ಕಟ್ಟಡ ಮಾಲೀಕರು ಪಾರ್ಕಿಂಗ್ ವ್ಯವಸ್ಥೆ ಮಾಡದ ಕಾರಣ ಹಾಗೂ ಸ್ಥಳೀಯಾಡಳಿತಗಾರರು, ಅಧಿಕಾರಿ ವರ್ಗದ ಬೇಜವಾಬ್ದಾರಿ ಪರಿಣಾಮ ಸಾರ್ವಜನಿಕರು ಅನುಭವಿಸಬೇಕಾಗುತ್ತಿದೆ. ಈ ಹಿನ್ನೆಲೆಯಲ್ಲಿ ತೊಕ್ಕೊಟ್ಟಿನಲ್ಲಾದರೂ ಇಂಥ ಸಮಸ್ಯೆಗೆ ಮುಕ್ತಿ ನೀಡಲು ಅಧಿಕಾರಿಗಳು ಮುಂದಾದರೆ ಸರ್ಕಾರದ ಕೋಟಿಗಟ್ಟಲೆ ಹಣ ಸುರಿಸಿ ಮಾಡಿದ ಕಾಮಗಾರಿಗೆ ಘನತೆ ಬರಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ರಾಷ್ಟ್ರೀಯ ಹೆದ್ದಾರಿಯಿಂದ ದೇರಳಕಟ್ಟೆ ಪ್ರವೇಶಿಸುವ ತೊಕ್ಕೊಟ್ಟು ಚೆಂಬುಗುಡ್ಡೆ ರಸ್ತೆ ದೇರಳಕಟ್ಟೆಗೆ ಮುಕುಟವಿದ್ದಂತೆ, ಈ ರಸ್ತೆ ಅಗಲೀಕರಣಗೊಳಿಸಿರುವ ಯು.ಟಿ.ಖಾದರ್‌ಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಸಾಲದು. ಈ ಮೂಲಕ ಪ್ರದೇಶಾಭಿವೃದ್ಧಿಗೆ ದೊಡ್ಡ ಕೊಡುಗೆ ಸಿಕ್ಕಂತಾಗಿದೆ. ಅದೇ ರೀತಿ ಸಮರ್ಪಕ ಚರಂಡಿ, ದಾರಿದೀಪ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಫುಟ್‌ಪಾತ್ ನಿರ್ಮಾಣ ಶೀಘ್ರ ಆಗಬೇಕಿದೆ. ಚಂದ್ರಹಾಸ ಶೆಟ್ಟಿ ದೇರಳಕಟ್ಟೆ ಜಿಲ್ಲಾಧ್ಯಕ್ಷರು, ಹೋಟೆಲ್ ಅಸೋಸಿಯೇಶನ್ ತೊಕ್ಕೊಟ್ಟು-ಚೆಂಬುಗುಡ್ಡೆ ರಸ್ತೆ ಮೊದಲ ಹಂತದ ಕಾಮಗಾರಿ ಮುಗಿದು ವಾಹನ ಸಂಚಾರಕ್ಕೆ ಅನುಕೂಲವಾಗಿದೆ, ರಸ್ತೆಯಲ್ಲೇ ಖಾಸಗಿ ಕಟ್ಟಡಗಳಿಗೆ ಬರುವ ಗ್ರಾಹಕರು ವಾಹನ ನಿಲ್ಲಿಸುವುದಕ್ಕೆ ಕಡಿವಾಣ ಹಾಕಬೇಕಿದೆ. ಒಳಚರಂಡಿ ವ್ಯವಸ್ಥೆ ಜತೆ ಎಲ್ಲ ಕಾಮಗಾರಿ ಮುಗಿದರೆ ತೊಕ್ಕೊಟ್ಟಿನ ಚಿತ್ರಣವೇ ಬದಲಾಗಲಿದೆ. ಅಝೀಝ್ ಕಲ್ಲೂರು, ನಿತ್ಯ ಪ್ರಯಾಣಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net