ನಿಟಿಲಾಪುರ ದೇವಳದಲ್ಲಿ ಅತಿಮಹಾರುದ್ರ ಯಾಗ : ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಮಾರ್ಗದರ್ಶನ

14
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಮೊಗರ್ನಾಡು ಸಾವಿರ ಸೀಮೆಯ ನಿಟಿಲಾಪುರದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಅತಿಮಹಾರುದ್ರ ಯಾಗ ಸಮಿತಿ ಆಶ್ರಯದಲ್ಲಿ ಶ್ರೀಮದ್ ಕಾಶಿ ಸಂಸ್ಥಾನ ಮಠಾಧೀಶ್ವರ 1008 ಜಗದ್ಗುರು ಪೀಠ ವಾರಣಾಸಿಯ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಅತಿಮಹಾರುದ್ರ ಯಾಗ ಭಾನುವಾರ ಸಂಪನ್ನಗೊಂಡಿತು.

ಯಾಗ ಸಮಿತಿ ಅಧ್ಯಕ್ಷ ಬ್ರಹ್ಮಾನಂದ ರೆಡ್ಡಿ, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಗೌರವಾಧ್ಯಕ್ಷ ರಘುನಾಥ ಸೋಮಯಾಜಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಟ್ಟಿ ಗೋಳ್ತಮಜಲು ನೇತೃತ್ವದಲ್ಲಿ ವಿದ್ವಾನ್ ಅನಂತರಾಮ ಐತಾಳ್ ಪೌರೋಹಿತ್ಯದಲ್ಲಿ 300ರಷ್ಟು ಋತ್ವಿಜ್ಞರ ಉಪಸ್ಥಿತಿಯಲ್ಲಿ 11 ಯಜ್ಞಕುಂಡಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಊರ, ಪರವೂರ ಸಹಸ್ರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.

ಸಮಿತಿ ಉಪಾಧ್ಯಕ್ಷರಾದ ಗಣೇಶ್ ರಾವ್ ಬರಿಮಾರು, ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು, ಸಚಿನ್ ರೈ ಮಾಣಿಗುತ್ತು, ಕೃಷ್ಣಪ್ಪ ಮೂಲ್ಯ ಅಮ್ಟೂರು, ದೇವದಾಸ್ ಪೂಜಾರಿ ಅಡ್ಯನಡ್ಕ, ಅರ್ಚಕ ಸಂಪ್ರೀತ್ ಭಟ್ ಸಹಿತ ಸಮಿತಿ ನಾನಾ ಪದಾಧಿಕಾರಿಗಳು, ಪ್ರಮುಖರು ನಾನಾ ಜವಾಬ್ದಾರಿಗಳನ್ನು ನಿರ್ವಹಿಸಿದರು. ಮುಂಜಾನೆ ಯಾಗ ಪ್ರಾರಂಭಗೊಂಡು ಮಧ್ಯಾಹ್ನ 11ರ ವೇಳೆಗೆ ಪೂರ್ಣಾಹುತಿ ನಡೆಯಿತು. ಬಳಿಕ ಮಹಾಪೂಜೆ, ಕಲಶಾಭಿಷೇಕ, ಮಹಾಮಂತ್ರಾಕ್ಷತೆ, ಅನ್ನಸಂತರ್ಪಣೆ ನೆರವೇರಿತು. ಜಗದ್ಗುರು ಕಾಶಿಪೀಠ ವಾರಣಾಸಿಯ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಅಂಜನಾಪುರ ಚಿಕ್ಕಮಗಳೂರಿನ ಶಿವಾನಂದಾಶ್ರಮದ ಸ್ವಾಮಿ ಚಿದಾನಂದಗಿರಿ, ರಾಜಸ್ಥಾನದ ಕೇದಾರ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಸೋಲೂರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಮೂಡುಬಿದಿರೆ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸಹಿತ ಸಂತರು, ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ಆರೆಸ್ಸೆಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಕಟೀಲು ಕ್ಷೇತ್ರದ ಅರ್ಚಕರಾದ ವೆಂಕಟರಮಣ ಆಸ್ರಣ್ಣ, ವಾಸುದೇವ ಆಸ್ರಣ್ಣ ಸಹಿತ ಊರ, ಪರವೂರ ಗಣ್ಯರು ಆಗಮಿಸಿದರು.

ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ವಿದ್ವಾನ್ ಗಣಪತಿ ಭಟ್ ತಿರುಪಳ್ಳಿ ಅವರು ಪ್ರಸ್ತುತ ಸನ್ನಿವೇಶದ ಕಾಲಘಟ್ಟದಲ್ಲಿ ಯಾಗದ ಅನಿವಾರ್ಯತೆ ಕುರಿತು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net