

ಕನಕಗಿರಿ: ಚಂದ್ರಯಾನ-3 ಉಡಾವಣೆಯಿಂದ ಇಡೀ ಜಗತ್ತು ಇಂದು ಭಾರತದತ್ತ ನೋಡುವಂತಾಗಿದೆ. ಉಪಗ್ರಹವನ್ನು ಚಂದ್ರನ ಮೇಲೆ ಇಳಿಸಲು ವಿಜ್ಞಾನಿಗಳು ನಿರ್ಧರಿಸಿದ್ದು, ಆ ಸಮಯಕ್ಕಾಗಿ ನಾವೆಲ್ಲರೂ ಕುತೂಹಲದಿಂದ ಕಾಯುತ್ತಿದ್ದೇವೆ ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.
ಪಟ್ಟಣದ ಕನಕಾಚಲ ದೇವಸ್ಥಾನದಲ್ಲಿ ಗರ್ಭಗುಡಿಯಲ್ಲಿ ರಾಷ್ಟ್ರಧ್ವಜಗಳೊಂದಿಗೆ ಚಂದ್ರಯಾನ-3 ಭಾವಚಿತ್ರ ಇಟ್ಟು ಬುಧವಾರ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಚಂದ್ರಯಾನ-3 615 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಉಪಗ್ರಹ ಈಗಾಗಲೇ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಯಾವುದೇ ತೊಂದರೆಯಾಗದಂತೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದು ತನ್ನ ಮುಂದಿನ ಕಾರ್ಯ ನಡೆಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದರು.
ಪ್ರಮುಖರಾದ ಸುದರ್ಶನ ರೆಡ್ಡಿ, ನಾಗರಾಜ ತೆಗ್ಯಾಳ, ವೆಂಕಟೇಶ ಸೌದ್ರಿ, ರಮೇಶ ಶೆಟ್ಟಿ, ದೇವಸ್ಥಾನದ ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ, ಗುಂಡಪ್ಪ ಚಿತ್ರಗಾರ, ಅರ್ಚಕ ವೆಂಕಟ ದೇಶಿಕಾಚಾರ್ಯ ಇತರರಿದ್ದರು.