ಜನಪ್ರತಿನಿಧಿಗಳ ಮಾತಿಗೆ ಬೆಲೆಯೇ ಇಲ್ಲ

gan-8
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳ ಮಾತಿಗೆ ಬೆಲೆಯೇ ಇಲ್ಲ. ಒಂದು ವರ್ಷದ ಹಿಂದೆ ಕಳೆದ ವರ್ಷ ಮಳೆಗಾಲದಲ್ಲಿ ನೆರೆ ಬಂದಾಗ ಹೇಳಿದ ಸಮಸ್ಯೆ ಈವತ್ತಿಗೂ ಹಾಗೆ ಇದೆ. ನಿಮ್ಮ ಸಮಸ್ಯೆಯನ್ನು ಮೊದಲೇ ಹೇಳಿದರೆ ಮೊದಲೇ ಕ್ಲೀಯರ್ ಮಾಡಬಹುದಿತ್ತು. ಒಂದು ವರ್ಷದ ಹಿಂದಿನ ಕಥೆಯನ್ನು ಈಗ ಹೇಳಿದರೆ ಇನ್ನೆರಡು ತಿಂಗಳಲ್ಲಿ ಮಾಡುವುದು ಹೇಗೆ ಎಂದು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮರಳು ಬ್ಲಾಕ್‌ಗಳಲ್ಲಿ ಮರಳು ತೆರವುಗೊಳಿಸಲು ನೀಡಿರುವ ಆಶಯ ಪತ್ರಗಳ ಪ್ರಗತಿ ಬಗ್ಗೆ ಕುಂದಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಶಾಸಕ ಕೊಡ್ಗಿ ಗರಂ ಆದರು.

ನೆರೆ ಬಂದರೆ ನಾವು ಹೊಣೆಯಲ್ಲ

ಕೆಲವು ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಹೊಳೆ ಸಮೀಪ ಖಾಸಗಿ ಜಮೀನಿದ್ದು , ಹೂಳನ್ನು ಸಾಗಿಸಲು ಖಾಸಗಿ ಸ್ಥಳದ ಮಾಲೀಕರು ಒಪ್ಪಿಗೆ ನೀಡುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ಅಂತಹ ಪಂಚಾಯಿತಿಗಳ ಸಭೆ ಕರೆದು ಖಾಸಗಿ ಸ್ಥಳದ ಮಾಲೀಕರ ಮನವೊಲಿಸುವ ಪ್ರಯತ್ನ ನಡೆಸಲಾಗುವುದು. ಇದಕ್ಕೆ ಒಪ್ಪದಿದ್ದರೆ ಹಾಗೇ ಇರಲಿ, ಮಳೆಗಾಲದಲ್ಲಿ ನೆರೆ ಬಂದು ತೊಂದರೆ ಆದರೆ ನಾವ್ಯಾರು ಜವಾಬ್ದಾರರಲ್ಲ ಎಂದರು.

37 ಬ್ಲಾಕ್‌ಗಳನ್ನು ಗುರುತಿಸಿ ಅವರಿಗೆ ಆಶಯ ಪತ್ರ ನೀಡಲಾಗಿದೆ. 37 ಪಂಚಾಯಿತಿಗಳ ಪೈಕಿ 22 ಪಂಚಾಯಿತಿಗಳು ಕಾರ್ಯನಿರ್ವಹಿಸುತ್ತಿವೆ. ಕೆಲವೊಂದು ಪಂಚಾಯಿತಿಗಳು ಶುಲ್ಕ ಪಾವತಿಸಿಲ್ಲ. ಕಾವ್ರಾಡಿ, ಯಡ್ತಾಡಿ, ವಡ್ಡರ್ಸೆ, ಉಳ್ತೂರು, ಕೆದೂರು, ಬೇಳೂರು ಗ್ರಾಮ ಪಂಚಾಯಿತಿಗಳಿಗೆ ಹೂಳೆತ್ತಲು ಅವಕಾಶ ನೀಡಲಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹೂಳೆತ್ತಲು ಅವಕಾಶ ಇಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಸಂದೀಪ್ ಹೇಳಿದರು.

ಎಲ್ಲ ಕಡೆಗಳಲ್ಲಿ ಡ್ಯಾಂ ಪಕ್ಕದಲ್ಲಿ ಹೂಳು ಶೇಖರಣೆಗೊಂಡಿದ್ದು, ತೆರವಿಗೆ ಸಣ್ಣ ನೀರಾವರಿ ಇಲಾಖೆಯವರು ಅನುಮತಿ ನೀಡುತ್ತಿಲ್ಲ. ಇಲಾಖೆ ಅನುಮತಿ ನೀಡಿದರೆ ಇಂತಹ ಪ್ರದೇಶಗಳಲ್ಲಿ ಹೂಳೆತ್ತಲು ಅವಕಾಶ ಕೊಡಬಹುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಸಂಧ್ಯಾ ಹೇಳಿದರು.

ಹಾಲಾಡಿ ಹೊಳೆಯಲ್ಲಿ ಮರಳುಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ನೂರಾರು ಲಾರಿಗಳು ಸಂಚರಿಸುವುದರಿಂದ ಶಾಲಾ ಮಕ್ಕಳು ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ರಸ್ತೆಗಳು ಹಾಳಾಗುತ್ತಿವೆ. ಈ ಬಗ್ಗೆ ದೂರು ನೀಡಿದರೆ ಯಾವುದೇ ಸ್ಪಂದನೆಯಿಲ್ಲ. ಸಾಂಪ್ರದಾಯಿಕ ಮರಳುಗಾರಿಕೆ ಮಾಡುವವರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಮೊಳಹಳ್ಳಿ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಹೇಳಿದರು.

ಚಿತ್ರಪಾಡಿಯಿಂದ ಕಾರ್ಕಡ ಸೇತುವೆ ತನಕ ಹೊಳೆಯಲ್ಲಿ ತುಂಬಿರುವ ಹೂಳು ತೆರವುಗೊಳಿಸಲು ಅವಕಾಶ ನೀಡಬೇಕು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧಿಕಾರಿ ಹೇಳಿದರು.

ಜಿಪಂ ಸಿಇಒ ಪ್ರತೀಕ್ ಬಾಯಲ್ ಮಾತನಾಡಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಹೂಳೆತ್ತಲು ಕ್ರಮಕೈಗೊಳ್ಳಬೇಕು. ಆಯಾ ಗ್ರಾಮ ಪಂಚಾಯಿತಿಗಳಿಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡುವಂತೆ ಆದೇಶಿಸಿದರು.

ಕುಂದಾಪುರ ತಹಸೀಲ್ದಾರ್ ಪ್ರದೀಪ ಕುರ್ಡೇಕರ್, ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ ಹೆಗ್ಡೆ, ಹೆಬ್ರಿ ತಹಸೀಲ್ದಾರ್ ಪ್ರಸಾದ್, ಕುಂದಾಪುರ ತಾಪಂ ಇಒ ಡಾ.ರವಿಕುಮಾರ್ ಹುಕ್ಕೇರಿ, ಬ್ರಹ್ಮಾವರ ತಾಪಂ ಇಒ ಇಬ್ರಾಹಿಂಪುರ, ಉಡುಪಿ ತಾಪಂ ಇಒ ವಿಜಯ್, ನೀರು ಸರಬರಾಜು ಇಲಾಖೆ ಇಂಜಿನಿಯರ್ ಉದಯ ಶೆಟ್ಟಿ, ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಉಪಸ್ಥಿತರಿದ್ದರು.

ಇದು ಮರಳು ಗಣಿಗಾರಿಕೆ ಅಲ್ಲ!

ಇದು ಮರಳು ಗಣಿಗಾರಿಕೆ ಅಲ್ಲ, ಕೇವಲ ಹೂಳೆತ್ತುವುದು. ಅದಕ್ಕೆ ನೀವು ಟೆನ್ಶನ್ ಮಾಡಿಕೊಳ್ಳಬೇಡಿ ಎಂದು ಹೇಳಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೊಳೆಗಳಲ್ಲಿ ತುಂಬಿರುವ ಹೂಳನ್ನು ತೆರವು ಮಾಡಲು ಯಾವ ಕ್ರಮಕೈಗೊಂಡಿದ್ದೀರಿ, ಇದಕ್ಕೆ ಪರಿಹಾರ ಏನು ಎಂದು ಪ್ರಶ್ನಿಸಿದರು. ಹೂಳು ಸಂಗ್ರಹಗೊಂಡಿದ್ದರಿಂದ ಕಳೆದ ಮಳೆಗಾಲದಲ್ಲಿ ಅನೇಕ ಕಡೆಗಳಲ್ಲಿ ನೆರೆ ಬಂದಿತ್ತು. ಹೂಳು ತೆರವಿಗೆ ಆಯಾ ಗ್ರಾಪಂಗಳಿಗೆ ಜವಾಬ್ದಾರಿ ನೀಡಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net