

ಬೆಂಗಳೂರು: ಬ್ರಾಹ್ಮಣ ಸಮುದಾಯದ ಬುದ್ಧಿವಂತಿಕೆ, ಸ್ಥಿತಪ್ರಜ್ಞೆಯು ಸಮಾಜ ಹಾಗೂ ದೇಶಕ್ಕೆ ಅನುಕೂಲವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸಿಸಿದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯ ಸರ್ಕಾರದ ಶಿಷ್ಯ ವೇತನ ತಂತ್ರಾಂಶದ ಮೂಲಕ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ‘ಸಾಂದೀಪನಿ ಶಿಷ್ಯ ವೇತನ’ ವಿತರಣೆಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಕಾರ್ಯಾರಂಭಿಸಿದ ಅಲ್ಪಾವಧಿಯಲ್ಲಿ ವ್ಯವಸ್ಥೆಯೊಳಗೆ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. 9,206 ವಿದ್ಯಾರ್ಥಿಗಳಿಗೆ ಒಟ್ಟು 13.77 ಕೋಟಿ ರೂ. ಶಿಷ್ಯ ವೇತನ ನೀಡಲಾಗಿದ್ದು, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ನೆರವು ನೀಡಲು ಮಂಡಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂಬ ಭರವಸೆ ನೀಡಿದರು.
ಬ್ರಾಹ್ಮಣರಲ್ಲಿ ಐಟಿ/ಬಿಟಿ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡವರು ಆರ್ಥಿಕವಾಗಿ ಸಬಲರಾಗಿದ್ದಾರೆ. ಆದರೂ ಆರ್ಥಿಕವಾಗಿ ಹಿಂದುಳಿದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಪ್ರೋತ್ಸಾಹಿಸಿದರು ಎಂದು ಬೊಮ್ಮಾಯಿ ಹೇಳಿದರು. ಇದೇ ಸಂದರ್ಭದಲ್ಲಿ ಬ್ರಾಹ್ಮಣ ರೈತರಿಗೆ ಕೃಷಿ ಆಧಾರಿತ ಉದ್ಯಮ ಸ್ಥಾಪನೆಗೆ ನೆರವು ನೀಡುವ ‘ಅನ್ನದಾತ’, ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಒದಗಿಸುವ ‘ಪುರುಷೋತ್ತಮ’ ಯೋಜನೆಗಳಿಗೆ ಚಾಲನೆ ನೀಡಿದರು.