ರೈತರನ್ನು ಸಂಕಷ್ಟಕ್ಕೆ ದೂಡಿದ ಕಾಡುಹಂದಿಗಳು

10-11-rama-wildboar1
Published on

* ನಿಯಂತ್ರಣಕ್ಕೆ ನಿಯಮವಿದ್ದರೂ ಪಾಲನೆ ಕಷ್ಟ

* ಗುಂಪಿನಲ್ಲಿ ಜಮೀನಿಗೆ ಲಗ್ಗೆ ಇಟ್ಟು ಬೆಳೆ ನಾಶ

ಗಂಗಾಧರ್ ಬೈರಾಪಟ್ಟಣ ರಾಮನಗರ

ಕಾಡಾನೆ ಆಯ್ತು, ಚಿರತೆಯೂ ಆಯ್ತು ಈಗ ಹಂದಿಗಳ ಸರದಿ. ರೈತರ ಜಮೀನುಗಳಿಗೆ ಗುಂಪಾಗಿ ಲಗ್ಗೆ ಇಡುತ್ತಿರುವ ಕಾಡು ಹಂದಿಗಳು ಬೆಳೆಯನ್ನು ನಾಶ ಮಾಡುವ ಮೂಲಕ ಬರದ ನಡುವೆ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿವೆ.

ಉಪಟಳ ನೀಡುತ್ತಿರುವ ಹಂದಿಗಳನ್ನು ಹತ್ಯೆ, ಬೇಟೆಯಾಡಲು ಕಾನೂನಿನಲ್ಲಿ ಅವಕಾಶವಿದ್ದರೂ, ಇರುವ ನಿಯಮಗಳ ಪಾಲನೆ ಕಷ್ಟವಾಗಿರುವ ಹಿನ್ನೆಲೆಯಲ್ಲಿ ರೈತರು ಕೈಕಟ್ಟಿ ಕೂರುವಂತೆ ಆಗಿದೆ.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಾಡುಹಂದಿಗಳ ಸಂಖ್ಯೆ ಹೆಚ್ಚಾಗಿದ್ದು, ಇವುಗಳ ದಾಳಿಯಿಂದ ರೈತರು ಬೆಳೆದಿರುವ ಬೆಳೆಗಳು ನಾಶವಾಗುತ್ತಿವೆ. ಇದು ರೈತರ ಆಕ್ರೋಶಕ್ಕೂ ಕಾರಣವಾಗಿದೆ. ಆದರೆ, ಇವರ ಆಕ್ರೋಶಕ್ಕೆ ಸದ್ಯಕ್ಕೆ ಸಮಾಧಾನವೇ ಮದ್ದಾಗಿದ್ದು, ಅನಿವಾರ್ಯವಾಗಿ ಇದನ್ನು ಸಹಿಸಿಕೊಳ್ಳಲೇಬೇಕಾಗಿದೆ.

ಕಠಿಣ ನಿಯಮ

ಕಾಡು ಹಂದಿಗಳ ಬೇಟೆಗೆ 2016ರಲ್ಲಿ ಅವಕಾಶ ನೀಡಲಾಗಿದೆ. ಆದರೆ, ಇದಕ್ಕೆ ಸಾಕಷ್ಟು ನಿಯಮಗಳನ್ನು ಹೇರಲಾಗಿದೆ. ರೈತರು ಜಮೀನಿನಲ್ಲಿ ಉಪಟಳ ನೀಡುವ ಹಂದಿಯನ್ನು ಮಾತ್ರ ಪರವಾನಗಿ ಹೊಂದಿದ ಬಂದೂಕು ಇಲ್ಲವೇ ಆಯುಧದ ಮೂಲಕವೇ ಹತ್ಯೆ ಮಾಡಬೇಕು. ಬೇಟೆಯಾಡಿದ 24 ಗಂಟೆಯೊಳಗೆ ಹತ್ತಿರದ ಅರಣ್ಯ ಇಲಾಖೆ ಕಚೇರಿಗೆ ಹಸ್ತಾಂತರ ಮಾಡಬೇಕು. ಬೇಟೆಗೆ ಬಳಸಿದ ಆಯುಧಗಳನ್ನು ಹಾಜರುಪಡಿಸಬೇಕು. ಉಪವಲಯ ಅರಣ್ಯಾಧಿಕಾರಿ ಕನಿಷ್ಠ 2 ಸಾಕ್ಷಿಗಳೊಂದಿಗೆ ಮಹಜರು ನಡೆಸಬೇಕು.

ಸತ್ತ ಕಾಡು ಹಂದಿಯ ಮಾಂಸವನ್ನು ಆಹಾರಕ್ಕೆ ಅಥವಾ ಇನ್ನಾವುದೇ ಉದ್ದೇಶಕ್ಕೆ ಬಳಸುವಂತಿಲ್ಲ. ಹಂದಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮೂರು ಅಡಿ ಆಳದಲ್ಲಿ ಹೂಳಬೇಕು, ಇಲ್ಲವೇ ಸುಡಬೇಕು. ಬೇಟೆ ವೇಳೆ ಕಾಡುಹಂದಿ ಕಾಡಿಗೆ ಹೋದರೆ ಅಂತಹ ಹಂದಿಯನ್ನು ಹಿಂಬಾಲಿಸಿ ಬೇಟೆಯಾಡುವಂತಿಲ್ಲ. ಮರಿಯೊಂದಿಗಿರುವ, ಇಲ್ಲವೇ ಹಾಲುಣಿಸುತ್ತಿರುವ ಕಾಡು ಹಂದಿಯನ್ನು ಬೇಟೆಯಾಡುವಂತಿಲ್ಲ ಎನ್ನುವ ನಿಯಮಗಳನ್ನು ಹೇರಲಾಗಿದೆ.

ಆದರೆ, ಕಾಡಂಚಿನ ಕೆಲ ರೈತರನ್ನು ಹೊರತುಪಡಿಸಿ ಯಾರ ಬಳಿಯೂ ಬಂದೂಕು ಇಲ್ಲ. ಇನ್ನು ಬೇಟೆಯಾಡಿ ಉಪಟಳ ತಪ್ಪಿಸುವುದಾದರೂ ಹೇಗೆ ಎನ್ನುವುದು ರೈತರ ಪ್ರಶ್ನೆಯಾಗಿದೆ.

ಹಿಂಡುಗಳಲ್ಲಿ ದಾಳಿ

ಕೇವಲ ಕಾಡಂಚಿನ ಜಮೀನುಗಳು ಮಾತ್ರವಲ್ಲದೆ ಬಹುತೇಕ ಎಲ್ಲ ಕಡೆಯಲ್ಲಿಯೂ ಕಾಡುಹಂದಿ ಹಾವಳಿ ಹೆಚ್ಚಿದೆ. ಕನಿಷ್ಠ 25ರಿಂದ 50ರ ಸಂಖ್ಯೆಯಲ್ಲಿ ಒಮ್ಮೆಲೆ ಲಗ್ಗೆ ಇಡುವ ಹಂದಿಗಳು ಇಡೀ ಬೆಳೆಯನ್ನು ನಾಶ ಮಾಡಿ ಅಲ್ಲಿಂದ ಪರಾರಿ ಆಗುತ್ತಿವೆ. ಪಟಾಕಿಗಳನ್ನು ಹೊಡೆದು ಬೆದರಿಸುವ ಕೆಲಸ ಮಾಡಿದರೂ ಬೆಚ್ಚದ ಹಂತಕ್ಕೆ ಹಂದಿಗಳು ಬಂದಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಏನು ಮಾಡಬೇಕು ಎನ್ನುವ ಪ್ರಶ್ನೆ ರೈತರನ್ನು ಕಾಡುತ್ತಿದೆ.

ಇಲಾಖೆಗೂ ಸಂಕಟ

ಹಂದಿಗಳ ಹಾವಳಿ ನಿಯಂತ್ರಿಸುವುದು ಅರಣ್ಯ ಇಲಾಖೆಗೂ ಸಂಕಟದ ಕೆಲಸವಾಗಿದೆ. 10-20ರ ಸಂಖ್ಯೆಯಲ್ಲಿದ್ದರೆ ಅವುಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬಹುದಿತ್ತು. ಆದರೆ ಇವುಗಳ ಸಂಖ್ಯೆ ಸಾವಿರ ಸಂಖ್ಯೆಯಲ್ಲಿದೆ. ಸೆರೆ ಹಿಡಿಯುವುದಾದರೂ ಹೇಗೆ, ಒಂದು ವೇಳೆ ಹಿಡಿದರೂ ಎಲ್ಲಿಗೆ ಬಿಡುವುದು ಎನ್ನುವ ಪ್ರಶ್ನೆ ಇಲಾಖೆಯದ್ದು. ಈಗಾಗಲೇ ಹಂದಿಗಳ ಬೇಟೆಗೆ ಅವಕಾಶ ನೀಡಿರುವುದರಿಂದ ಯಾವುದೇ ರೈತರು ಪರವಾನಗಿ ಹೊಂದಿದ ಬಂದೂಕಿನ ಮೂಲಕ ಹತ್ಯೆ ಮಾಡಬಹುದಾಗಿದೆ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದ್ದಾರೆ.

ಅರಣ್ಯ ಇಲಾಖೆ ಹಂದಿ ಹತ್ಯೆ ಮಾಡಲು ಅವಕಾಶ ನೀಡಿದೆ. ಆದರೆ, ಬಂದೂಕು ಕೊಡುವುದು ಮರೆತಿದೆ. ಇಲಾಖೆಯೇ ಕನಿಷ್ಠ ಇಂತಿಷ್ಟು ಜಮೀನು ಮಾಲೀಕರಿಗೆ ಒಬ್ಬರಂತೆ ಬಂದೂಕು ಪರವಾನಗಿ ಕೊಡಿಸಲಿ. ಇಲ್ಲವೇ ಇಲಾಖೆ ಮೂಲಕವೇ ಹಂದಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಿ.ಸಿ.ಪುಟ್ಟಸ್ವಾಮಿ, ರೈತ ಮುಖಂಡ
ರಾತ್ರಿ ವೇಳೆಯಲ್ಲಿ ನಮ್ಮ ಗದ್ದೆಗೆ ಲಗ್ಗೆ ಇಡುವ ಹಂದಿಗಳು ಇಡೀ ಬತ್ತದ ಬೆಳೆ ನಾಶ ಮಾಡುತ್ತಿವೆ. ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡುವ ಜತೆಗೆ ಹಂದಿಗಳನ್ನು ಯಾವುದೇ ರೂಪದಲ್ಲಿಯಾದರೂ ಕಡಿಮೆ ಮಾಡಲು ಕ್ರಮ ವಹಿಸಬೇಕು.

ಹನುಮಯ್ಯ, ರೈತ, ಗುನ್ನೂರು

ಆನೆ, ಚಿರತೆ, ಕರಡಿಗಳನ್ನು ಸೆರೆ ಹಿಡಿದು ಬೇರೆಡೆಗೆ ಬಿಡಬಹುದು, ಸಾವಿರಾರು ಸಂಖ್ಯೆಯಲ್ಲಿರುವ ಹಂದಿಗಳನ್ನು ನಿಯಂತ್ರಿಸುವುದಾದರೂ ಹೇಗೆ. ರೈತರು ಒಗ್ಗೂಡಿ ಬಂದರೆ ಬಂದೂಕು ಪರವಾನಗಿ ಕೊಡಿಸಲು ಕ್ರಮ ವಹಿಸಲಾಗುವುದು. ರಾಮಕೃಷ್ಣಪ್ಪ, ಡಿಸಿಎಫ್, ಪ್ರಾದೇಶಿಕ ವಿಭಾಗ, ರಾಮನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net