

ಸಿದ್ದಾಪುರ:ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಕಾರ್ಮಿಕರು ಬೆಳೆಗಾರರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದ 30 ವರ್ಷದ ಗಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಪಾಲಿಬೆಟ್ಟ ಸಮೀಪದ ಎಮ್ಮೆಗುಂಡಿ ಕಾಫಿ ತೋಟದಲ್ಲಿ ಬುಧವಾರ ಬೆಳಗ್ಗೆ ಕಾಡಾನೆ ಕಾಣಿಸಿಕೊಂಡಿತು. ಮತ್ತಿಗೋಡು ಹಾಗೂ ದುಬಾರೆ ಶಿಬಿರದ ಅಭಿಮನ್ಯು ನೇತೃತ್ವದಲ್ಲಿ ಭೀಮಾ, ಮಹೇಂದ್ರ, ಹರ್ಷ, ಧನಂಜಯ, ಅಶ್ವತ್ಥಾಮ ಆರು ಸಾಕಾನೆಗಳೊಂದಿಗೆ ವನ್ಯಜೀವಿ ವೈದ್ಯ ರಮೇಶ್, ಚಟ್ಟಿಯಪ್ಪ, ಶಾರ್ಪ್ ಶೂಟರ್ ರಂಜನ್ ಸೇರಿದಂತೆ 100ಕ್ಕೂ ಹೆಚ್ಚು ಸಿಬ್ಬಂದಿ ತಂಡ ಕಾರ್ಯಾಚರಣೆ ಕೈಗೊಂಡು ಸೆರೆ ಹಿಡಿದಿದ್ದಾರೆ.
ಕಾರ್ಯಾಚರಣೆ ಸಂದರ್ಭ ಕಾಫಿ ತೋಟದಿಂದ ಕಾಲ್ಕಿತ್ತ ಕಾಡಾನೆ ಸಿದ್ದಾಪುರ ತೋಟ, ಘಟ್ಟತಳ, ಕರಡಿಗೋಡು, ಮಾರ್ಗವಾಗಿ ಚಿಕ್ಕನಹಳ್ಳಿಯ ಫಯಾಜ್ ಅವರ ತೋಟದಲ್ಲಿ ಕಾಣಿಸಿಕೊಂಡಿತು. ಸುಮಾರು ಹತ್ತು ಕಿಲೋಮೀಟರ್ ಕಾಫಿ ತೋಟದ ಕಡಿದಾದ ರಸ್ತೆಯಲ್ಲಿಯೇ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ದುಬಾರೆ ಅರಣ್ಯಕ್ಕೆ ತೆರಳಲು ಸಿದ್ಧವಾಗಿದ್ದ ಕಾಡಾನೆಯನ್ನು ಚಿಕ್ಕನಹಳ್ಳಿ ಕಾಫಿ ತೋಟದಲ್ಲಿ ಆರು ಸಾಕಾನೆಗಳ ಸಹಕಾರದೊಂದಿಗೆ ಸುತ್ತುವರಿದರು.
ಶಾರ್ಪ್ ಶೂಟರ್ ರಂಜನ್ ಬಂದೂಕಿನ ಮೂಲಕ ಅರಿವಳಿಕೆ ಡಾಟ್ ಮಾಡಿದ ತಕ್ಷಣ ಒಂದು ಕಿಲೋಮೀಟರ್‌ನಷ್ಟು ಓಡಿದ ಕಾಡಾನೆ ನಿಯಂತ್ರಣ ಕಳೆದುಕೊಂಡಿತು. ಆರು ಸಾಕಾನೆ ಹಾಗೂ ಅರಣ್ಯ ಸಿಬ್ಬಂದಿ ಸಹಕಾರದಿಂದ ಕಾಡಾನೆ ಕಾಲಿಗೆ ಹಗ್ಗ ಬಿಗಿದು, ಚಿಕಿತ್ಸೆ ನೀಡಿ ಸುಧಾರಿಸಿದ ನಂತರ ಸೆರೆ ಹಿಡಿದು ಅಂತರಸಂತೆ ಅರಣ್ಯಕ್ಕೆ ರವಾನೆ ಮಾಡಲಾಯಿತು.
ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ದುರ್ಗಮ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಆನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಯಿತು. ಎಸಿಎಫ್ ಗೋಪಾಲ್, ನೆಹರು, ಆರ್‌ಎಫ್‌ಒ ಕಳ್ಳಿರ ಎಂ ದೇವಯ್ಯ, ಗಂಗಾಧರ, ಡಿಆರ್‌ಎಫ್‌ಒ ಶ್ರೀನಿವಾಸ್, ಉಮಾಶಂಕರ್, ದೇವರಾಜ್, ರವಿಶಂಕರ್ ಹಾಗೂ ಅಮ್ಮತ್ತಿ, ತಿತಿಮತಿ ವಲಯದ ಆರ್‌ಆರ್‌ಟಿ ಸಿಬ್ಬಂದಿ ಕಾರ್ಯಾಚರಣೆ ಪಾಲ್ಗೊಂಡಿದ್ದರು.
ರೇಡಿಯೋ ಕಾಲರ್ ಅಳವಡಿಕೆ: ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಜನರ ಮೇಲೆ ದಾಳಿ ನಡೆಸುತ್ತಿದ್ದ ಹಾಗೂ ಕಾಫಿ ತೋಟದಲ್ಲಿ ಸಾಕಷ್ಟು ಉಪಟಳ ನೀಡುತ್ತಿದ್ದ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ ಎಂದು ವಿರಾಜಪೇಟೆ ಡಿಸಿಎಫ್ ಜಗನ್ನಾಥ್ ಹೇಳಿದರು.
ಒಂದು ತಿಂಗಳ ಹಿಂದೆಯೇ ಕಾಡಾನೆಯನ್ನು ಗುರುತು ಮಾಡಿ ದಕ್ಷ ಎಂದು ಹೆಸರಿಡಲಾಗಿತ್ತು. ಆನೆಯ ಬಗ್ಗೆ ಸಿಬ್ಬಂದಿ ನಿಗಾ ವಹಿಸಿದ್ದರು. ಚೀಫ್ ವೈಡ್ ಲೈಫ್ ಅಧಿಕಾರಿಗಳ ಆದೇಶದ ಮೇರೆಗೆ ಆನೆಗೆ ರೇಡಿಯೋ ಕಾಲರ್ ಅಳವಡಿಸಿ ನಾಗರಹೊಳೆ ವ್ಯಾಪ್ತಿಯ ಅಂತರಸಂತೆ ಅರಣ್ಯಕ್ಕೆ ಬಿಡಲಾಗುವುದು ಎಂದು ತಿಳಿಸಿದರು.