ಗ್ರಾಮ ಆಡಳಿತ ಕಚೇರಿ ಶಿಥಿಲ: ಮುರಿದು ಬೀಳುವ ಸ್ಥಿತಿಯಲ್ಲಿ ಕಿಟಿಕಿ, ಬಾಗಿಲು

Btw_VA-Office
Published on

ಬಂಟ್ವಾಳ: ಮಳೆಗಾಲದ ಸಂದರ್ಭ ಮನೆಗಳು ಅಪಾಯ ಸ್ಥಿತಿಯಲ್ಲಿದ್ದರೆ ಕಂದಾಯ ಇಲಾಖೆಯವರು ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡುತ್ತಾರೆ. ಆದರೆ ಪಾಣೆಮಂಗಳೂರು ಗ್ರಾಮ ಆಡಳಿತ ಅಧಿಕಾರಿಯವರ ಕಚೇರಿಯ ಸ್ಥಿತಿ ನೋಡಿದರೆ ಮುರುಕಲು ಮನೆಗಿಂತಲೂ ಕಡೆಯಾಗಿದ್ದು, ಅಲ್ಲಿನ ಸಿಬ್ಬಂದಿ ವರ್ಷವಿಡೀ ಅದೇ ಕಚೇರಿಯಲ್ಲಿ ಕಾರ್ಯಾವೆಸಗಬೇಕಿದೆ. ಸಾರ್ವಜನಿಕರಿಗೆ ಕೆಲಸವಾಗಬೇಕಿದ್ದರೆ ಅದೇ ಅಪಾಯಕಾರಿ ಕಟ್ಟಡಕ್ಕೆ ತೆರಳಬೇಕಿದೆ.

ಪಾಣೆಮಂಗಳೂರಿನ ಬಂಗ್ಲೆಗುಡ್ಡೆಯಲ್ಲಿರುವ ಈ ಕಟ್ಟಡದಲ್ಲಿ ಅಡಿಪಾಯದಿಂದ ಮೇಲ್ಛಾವಣಿವರೆಗೂ ಎಲ್ಲವೂ ಶಿಥಿಲಾವಸ್ಥೆಯಲ್ಲಿದೆ. ಇಂಥ ಅಪಾಯಕಾರಿ ಕಟ್ಟಡದಲ್ಲಿ ಗ್ರಾಮ ಆಡಳಿತ ಕಚೇರಿ ಕಾರ್ಯಾಚರಿಸುವುದು ಸರಿಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಕಟ್ಟಡದ ಬಾಗಿಲು, ಕಿಟಕಿಗಳು ಮುರುಕಲು ಸ್ಥಿತಿಯಲ್ಲಿದ್ದು, ಬಾಗಿಲನ್ನು ಜೋರಾಗಿ ದೂಡಿದರೆ ಮುರಿದು ಬೀಳುವ ಸ್ಥಿತಿಯಲ್ಲಿದೆ.

ಈ ಹಳೆಯ ಕಟ್ಟಡದಲ್ಲಿ ಹಿಂದೆ ಪಾಣೆಮಂಗಳೂರು ಕಂದಾಯ ನಿರೀಕ್ಷಕರ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ತಾಲೂಕು ಆಡಳಿತ ಸೌಧ ನಿರ್ಮಾಣಗೊಂಡ ಬಳಿಕ ಅದು ಬಿ.ಸಿ.ರೋಡಿಗೆ ಸ್ಥಳಾಂತರಗೊಂಡಿತ್ತು. ಪ್ರಸ್ತುತ ಗ್ರಾಮ ಆಡಳಿತ ಕಚೇರಿ ಕಾರ್ಯಾಚರಿಸುತ್ತಿದ್ದು, ಕಚೇರಿಯ ದಾಖಲೆಗಳು ಕೂಡ ಅದೇ ಹಳೇ ಕಟ್ಟಡಲ್ಲಿವೆ.

ಕಟ್ಟಡದ ಮೇಲ್ಛಾವಣಿ ಶಿಥಿಲಾವಸ್ಥೆಯಲ್ಲಿರುವುದರಿಂದ ಕಳೆದ ಮಳೆಗಾಲದಲ್ಲಿ ಗ್ರಾಮ ಆಡಳಿತ ಕಚೇರಿಗೆ ಬಾಡಿಗೆ ಕಟ್ಟಡ ಹುಡುಕಲಾಗಿದ್ದು, ಆದರೆ ಅವರಿಗೆ ಸೂಕ್ತ ಕಚೇರಿ ಸಿಕ್ಕಿರಲಿಲ್ಲ. ಈಗಲೂ ಕಚೇರಿ ಅದೇ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪಾಣೆಮಂಗಳೂರು ಗ್ರಾಮ ಆಡಳಿತ ಕಚೇರಿಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬರುತ್ತಿದೆ.

ಸಾಮಾನ್ಯ ಸಭೆಯಲ್ಲಿ ಚರ್ಚೆ

ಈ ಕಟ್ಟಡ ಬಂಟ್ವಾಳ ಪುರಸಭಾ ಅಧೀನದಲ್ಲಿದ್ದು, ಹಿಂದೊಮ್ಮೆ ಕಟ್ಟಡವನ್ನು ದುರಸ್ತಿಪಡಿಸಬೇಕು ಎಂಬ ಪ್ರಸ್ತಾವ ಬಂದಾಗ ಹಳೇ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಕಟ್ಟಡ ಈಗಲೂ ಹಾಗೇ ಇದ್ದು, ದುರಸ್ತಿಯೂ ಇಲ್ಲ. ತೆರವು ಕೂಡ ಇಲ್ಲ ಎಂಬ ಸ್ಥಿತಿಯಲ್ಲಿದೆ. ಈ ಹಳೇ ಕಟ್ಟಡವನ್ನು ತೆರವುಗೊಳಿಸಬೇಕೆಂದು ಇತ್ತೀಚೆಗೆ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net