

ಗುರುಪುರ: ಮಂಗಳೂರು ಮಹಾನಗರ ಪಾಲಿಕೆ ಆ.4ರಂದು ಹೊರಡಿಸಿರುವ ನೋಟಿಸ್ ಅನ್ವಯ ಕೆತ್ತಿಕಲ್ ಗುಡ್ಡದ ಮೇಲ್ಭಾಗದಲ್ಲಿರುವ ಅಮೃತನಗರದ 12 ಮನೆಯವರು ತಾತ್ಕಾಲಿಕ ನೆಲೆಯಲ್ಲಿ ನೆರೆಮನೆಗೆ ತೆರಳಿದ್ದಾರೆ.
ಹಿಂದೆ ಗುರುಪುರ ಮಠದಗುಡ್ಡೆ ಕುಸಿದಾಗ 11 ಕುಟುಂಬಗಳಿಗೆ ಬಾಡಿಗೆ ಮೊತ್ತ, ನಿವೇಶನ ಒದಗಿಸುವುದಾಗಿ ಭರವಸೆ ನೀಡಿದ್ದ ಜಿಲ್ಲಾಡಳಿತ ಎಲ್ಲ 11 ಕುಟುಂಬವನ್ನು ಎತ್ತಂಗಡಿ ಮಾಡಿತ್ತು. ನಾಲ್ಕೂವರೆ ವರ್ಷವಾದರೂ ಮಠದಗುಡ್ಡೆ ಸೈಟ್ ಸಂತ್ರಸ್ತಗರಿಗೆ ಬಾಡಿಗೆಯು ಸಿಕ್ಕಿಲ್ಲ, ನಿವೇಶನವೂ ಲಭಿಸಿಲ್ಲ. ಪ್ರಸಕ್ತ ಕೆತ್ತಿಕಲ್ ಅಮೃತನಗರದ ಕುಟುಂಬಗಳ ಎತ್ತಂಗಡಿ, ವಿದ್ಯುತ್, ನೀರಿನ ಸಂಪರ್ಕ ಕಡಿದು ಹಾಕಲಾದ ಸ್ಥಿತಿ ಕಂಡಾಗ ಈ ಕುಟುಂಬಗಳಿಗೆ ಭವಿಷ್ಯದಲ್ಲಿ ಮನೆ ಕಳೆದುಕೊಳ್ಳುವ ಭೀತಿ ಉಂಟಾಗಿದೆ.
ಯಾವುದೇ ಸೂಚನೆ ನೀಡದೆ ಆ.6ರಂದು ಮೇಲಧಿಕಾರಿಗಳ ಆದೇಶವಿದೆ ಎಂದಿರುವ ಸಿಬ್ಬಂದಿ ಅಮೃತನಗರದ 12 ಮನೆಗಳ ವಿದ್ಯುತ್, ನೀರಿನ ಸಂಪರ್ಕ ಕಡಿದು ಹಾಕಿದ್ದಾರೆ. ಎಲ್ಲರು ತಿರುವೈಲು ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ (ಗಂಜಿ) ಕೇಂದ್ರಕ್ಕೆ ತೆರಳಬೇಕು. ಇಲ್ಲವೇ ಬಾಡಿಗೆ ಮನೆಗಳಿಗೆ ಸ್ಥಳಾಂತರವಾಗಬೇಕು ಎಂದು ಮನಪಾ ನೋಟಿಸ್ನಲ್ಲಿ ಸೂಚಿಸಲಾಗಿದೆ. ಆ.3ರಂದು ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಯೊಬ್ಬರು, ಹಗಲು ಹೊತ್ತು ಮನೆಯಲ್ಲಿದ್ದು, ರಾತ್ರಿ ಮಾತ್ರ ಕಡ್ಡಾಯವಾಗಿ ಮನೆ ಖಾಲಿ ಮಾಡಬೇಕು ಎಂದಿದ್ದರು. ಈಗ ನೀರು, ವಿದ್ಯುತ್ ಸಂಪರ್ಕ ಕಡಿದು ಹಾಕಿರುವುದರಿಂದ ಮನೆಗಳಲ್ಲಿ ನಿಲ್ಲಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿರುವ ಸಂತ್ರಸ್ತರು, ‘ಶಾಶ್ವತವಾಗಿ ಮನೆ ಬಿಡಿಸಲು ಜಿಲ್ಲಾಡಳಿತ ನಡೆಸಿರುವ ತಂತ್ರಗಾರಿಕೆ ಇರಬಹುದು’ ಎಂದು ಆರೋಪಿಸಿದ್ದಾರೆ.
ಕೆತ್ತಿಕಲ್ ಗುಡ್ಡದಿಂದ ಅಗತ್ಯಕ್ಕಿಂತ ಹೆಚ್ಚು ಮಣ್ಣು ತೆಗೆದು ಮಾರಾಟ ಮಾಡಲಾಗಿದೆ ಎಂಬ ಬಲವಾದ ಆರೋಪವೊಂದು ಕೇಳಿ ಬರುತ್ತಿದೆ. ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಣ್ಣು ಮಾರಾಟ ಆರೋಪದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ಗಣಿ, ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಸ್ಟಷ್ಟನೆ ಕೇಳಿದ್ದರು. ಇಲ್ಲಿ ಮಣ್ಣು ಮಾರಲು ಅನುಮತಿ ನೀಡಿದ ಇಲಾಖೆ ಅಧಿಕಾರಿಗಳು ಹಾಗು ಹಣ ಪಡೆದುಕೊಂಡಿರುವವರು ಯಾರೆಂಬುದು ಜಿಲ್ಲಾಡಳಿತಕ್ಕೆ ಚೆನ್ನಾಗಿ ಗೊತ್ತಿದ್ದರು, ಸಂತ್ರಸ್ತರ ಮೇಲೆ ಬ್ರಹ್ಮಾಸ ಪ್ರಯೋಗ ಮಾಡುತ್ತಿದೆ ಎಂದು ಸಂತ್ರಸ್ತರು ಆರೋಪಿಸುತ್ತಿದ್ದಾರೆ.
ಕೆತ್ತಿಕಲ್ ಗುಡ್ಡದ ಮೇಲ್ಭಾಗದಲ್ಲಿರುವ ಅಮೃತನಗರದ 12 ಮನೆಗಳಿಗೆ ಆ. 4ರಂದು ನೊಟೀಸ್ ಜಾರಿ ಮಾಡಿರುವ ಮಂಗಳೂರು ಮಹಾನಗರ ಪಾಲಿಕೆಯು ಸಂತ್ರಸ್ತರೆಲ್ಲರೂ ವಾಮಂಜೂರು ತಿರುವೈಲು ವಾರ್ಡ್ನ ತಿರುವೈಲು ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಲಾದ ಕಾಳಜಿ ಕೇಂದ್ರಕ್ಕೆ(ಗಂಜಿ ಕೇಂದ್ರ) ತೆರಳುವಂತೆ ಸೂಚಿಸಿತ್ತು. ಅಚ್ಚರಿಯ ಸಂಗತಿಯೆಂದರೆ ಆ. 7ರಂದು ತಿರುವೈಲು ಶಾಲೆಗೆ ಹೋಗಿ ಪರಿಶೀಲಿಸಿದರೆ ಅಲ್ಲಿ ಯಾವುದೇ ಕಾಳಜಿ ಕೇಂದ್ರ ತೆರೆದಿಲ್ಲ. ಬದಲಾಗಿ ಅಂತಹ ಕುರುಹೂ ಕಂಡು ಬಂದಿಲ್ಲ. ಕಂದಾಯ ಇಲಾಖೆ ಅಥವಾ ಇತರ ಯಾವುದೇ ಇಲಾಖೆಯಿಂದ ಶಾಲೆಗೆ ನೋಟಿಸ್ ಬಂದಿಲ್ಲ ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ನಾನೊಬ್ಬ ಬಡವ. ಮನೆ ಖಾಲಿ ಮಾಡಿ ಸಂಬಂಧಿಕರ ಮನೆಗೆ ಹೋಗಿದ್ದೇನೆ. ದಿನದಲ್ಲಿ ಮನೆಗೆ ಹೋಗಿ ಬರಬಹುದೆಂದು ಅಧಿಕಾರಿಗಳು ಸೂಚಿಸಿದ್ದರೂ, ಆ.5ರಂದು ಮನೆಯ ವಿದ್ಯುತ್, ನೀರಿನ ಸಂಪರ್ಕ ಕಡಿದು ಹಾಕಲಾಗಿದೆ. ಕೆತ್ತಿಕಲ್ ಗುಡ್ಡದಿಂದ ಮಣ್ಣು ಮಾರಾಟ ಮಾಡಿರುವುದರಿಂದ ನಮಗೆ ಈ ಸ್ಥಿತಿ ಬಂದಿದೆ. ಯೋಗೀಶ್ ಪೂಜಾರಿ, ಸಂತ್ರಸ್ತ
ಯೋಗೀಶ್ ಪೂಜಾರಿ, ಸಂತ್ರಸ್ತ
ನಾನು ಮತ್ತು ನನ್ನ ಸಹೋದರ ಲಕ್ಷಾಂತರ ರೂ. ನೀಡಿ ಇಲ್ಲಿ ಹೊಸ ಮನೆ ಖರೀದಿಸಿದ್ದೇವೆ. ಇದೀಗ ಮನೆ ಖಾಲಿ ಮಾಡಲು ಮನಪಾ ನೋಟಿಸ್ ನೀಡಿದೆ. ಬಾಡಿಗೆ ಮನೆಗೆ ಹೋಗಿದ್ದೇವೆ. ಯಾರೋ ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವಂತಾಗಿದೆ. ರಿತೇಶ್ ಕುಲಾಲ್,ಅಮೃತನಗರದ ಸಂತ್ರಸ್ತ
ರಿತೇಶ್ ಕುಲಾಲ್,ಅಮೃತನಗರದ ಸಂತ್ರಸ್ತ
ನಮ್ಮ ಮನೆಯಲ್ಲಿ ಮಕ್ಕಳು ಇದ್ದು ಸದ್ಯ ನೆರೆಮನೆಯಲ್ಲಿ ವಾಸಿಸುತ್ತಿದ್ದೇವೆ. ಕಾಳಜಿ ಕೇಂದ್ರದಲ್ಲಿ ಶೌಚಗೃಹ, ಸ್ನಾನಗೃಹ ವ್ಯವಸ್ಥೆ ಮಾಡಲಾಗಿದೆಯೇ? ಹೆದ್ದಾರಿ ಕಾಮಗಾರಿ ಹೆಸರಲ್ಲಿ ಮಣ್ಣು ಮಾರಾಟ ಮಾಡಲಾಗಿದೆ ಎನ್ನಲಾಗುತ್ತಿದೆ. ಜಿಲ್ಲಾಡಳಿತ ನಮ್ಮ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ರೂಪಿಣಿ ,ಸಂತ್ರಸ್ತ ಮಹಿಳೆ
ರೂಪಿಣಿ ,ಸಂತ್ರಸ್ತ ಮಹಿಳೆ