ವಚನದ ಮೂಲಕ ಜೀವನ ಮೌಲ್ಯ

ವಚನದ ಮೂಲಕ ಜೀವನ ಮೌಲ್ಯ
Published on

ಕೊಳ್ಳೇಗಾಲ: ಹನ್ನೆರಡನೇ ಶತಮಾನದ ಶಿವ ಶರಣೆಯರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಮಹಿಳೆಯರು ಹೇಗೆ ಜೀವಿಸಬೇಕೆಂದು ತಿಳಿಸಿದ್ದಾರೆ ಎಂದು ರೋಟರಿ ಸಂಸ್ಥೆಯ ಅಧ್ಯಕ್ಷೆ ಹಾಗೂ ನಿವೃತ್ತ ಉಪನ್ಯಾಸಕಿ ಸರಸ್ವತಿ ಹೊನ್ನಪ್ಪ ಹೇಳಿದರು.

ಪಟ್ಟಣದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸೋಮವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಆಯೋಜಿಸಿದ್ದ ಶರಣ ಲಿಂಗೈಕ್ಯ ಶ್ರೀದೇವೇಂದ್ರಗುಪ್ತ ಎಪಿಎಸ್ ದತ್ತಿ ಕಾರ್ಯಕ್ರಮ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ದೇಶಿಸಿ ಮಾತನಾಡಿದರು.

ವಂಚನೆ, ಲಂಚಕ್ಕೆ ಕೈಯನ್ನು ವೊಡ್ಡಬಾರದೆಂದು ವಚನಗಾರ್ತಿ ಸತ್ಯಕ್ಕ ಹೇಳಿದ್ದಾರೆ. ಆಯ್ದಕ್ಕಿ ಲಕ್ಕಮ್ಮ ಅವರು ಪರುಷರು ಹಾಗೂ ಮಹಿಳೆಯರು ಸಮಾನರು, ಭಕ್ತಿ, ಸಂಕಲ್ಪ ಹೇಗಿರಬೇಕು ಎಂಬುದನ್ನು ತಿಳಿಸಿದ್ದಾರೆ. ಹೀಗೆ ಹಲವು ಶಿವಶರಣೆಯರು ಸಮಾಜದಲ್ಲಿ ಜವಬ್ದಾರಿಯುತವಾಗಿ ಜೀವಿಸಬೇಕೆಂಬುದನ್ನು ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.

12 ಶತಮಾನದಲ್ಲಿಯೇ ಮಹಿಳೆಯರಿಗೆ ವಾಕ್ ಸ್ವಾತಂತ್ರೃ, ಸಮಾನತೆ ದೊರೆತಿದೆ. ಇದಕ್ಕೆ ಅನುಭವ ಮಂಟಪವೇ ಸಾಕ್ಷಿಯಾಗಿದೆ. ವಚನಗಳ ಕಲಿಕೆಯಿಂದ ಸಂಸ್ಕಾರಯುತ ಜೀವನವನ್ನು ಸಾಗಿಸಬಹುದಾಗಿದೆ. ಪಾಲಕರು ಶಿಕ್ಷಣ ಜತೆಗೆ ಶರಣರ ವಚನ ಕಲಿಸಬೇಕು ಎಂದು ಕಿವಿ ಮಾತು ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ ಮಾತನಾಡಿ, ಮಕ್ಕಳಿಗೆ ದಿನಕ್ಕೊಂದು ವಚನವನ್ನು ಕಲಿಸಬೇಕು. ಇದ್ದರಿಂದ ಮಕ್ಕಳು ಸನ್ಮಾರ್ಗದಲ್ಲಿ ನಡೆಯುವುದರ ಜತೆಗೆ ಜೀವನದ ಮೌಲ್ಯ ತಿಳಿಯಲಿದೆ ಎಂದರು.

ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಸ್ಥಾಪಕ ನಟರಾಜನ್, ಲಯನ್ಸ್ ವಿದ್ಯಾಸಂಸ್ಥೆಯ ಮಾಜಿ ಕಾರ್ಯದರ್ಶಿ ಮಹದೇವಪ್ರಸಾದ್, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಕಾರ್ಯದರ್ಶಿ ಶಿವಕುಮಾರ್, ಶಿವಸ್ವಾಮಿ, ಇಂದ್ರೇಶ್, ಯೋಗ ಶಿಕ್ಷಣ ಸಮಿತಿ ಮಹಿಳಾ ಸಂಚಾಲಕಿ ಜ್ಯೋತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net