

ನೆಲಮಂಗಲ: ತಾಲೂಕಿನ ಆನಂದನಗರದಲ್ಲಿನ ಮಸೀದಿಯಲ್ಲಿ ಅಜಾನ್ ಕೂಗುವ ವಿಚಾರಕ್ಕೆ ಸಂಬಂಧಿಸಿ ಬುಧವಾರ ರಾತ್ರಿ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿಕೊಂಡಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ಸಂಬಂಧ 29 ಮಂದಿ ವಿರುದ್ಧ ದೂರು ದಾಖಲಾಗಿದ್ದು, ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಸದ್ಯ ಪರಿಸ್ಥಿತಿ ತಿಳಿಯಾಗಿದೆ.
ಬುಧವಾರ (ಮೇ 6) ರಾತ್ರಿ 8 ಗಂಟೆಗೆ ಎಂದಿನಂತೆ ಮಸೀದಿಯಲ್ಲಿ ಅಜಾನ್ ಕೂಗುವ ವೇಳೆ ಸ್ಥಳೀಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿದ್ದಪ್ಪ, ಧ್ವನಿವರ್ಧಕ ಶಬ್ದ ಕಡಿಮೆ ಮಾಡುವಂತೆ ಮನವಿ ಮಾಡಿದ್ದರು. ಮಸೀದಿಯಲ್ಲಿದ ಜಬೀ ಎಂಬಾತ ಇದಕ್ಕೆಸಮ್ಮತಿಸದೆ ಅವಾಚ್ಯವಾಗಿ ನಿಂದಿಸಿ ಸಿದ್ದಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ವಿಷಯ ತಿಳಿದು ಪ್ರಶ್ನಿಸಲು ಬಂದ ಸಿದ್ದಪ್ಪ ಸಂಬಂಧಿ ಮೋಹನ್ ಮೇಲೂ ಹಲ್ಲೆ ನಡೆಸಿದ್ದ.
ಗಲಾಟೆ ವಿಚಾರ ಹರಡುತ್ತಿದ್ದಂತೆ ಆನಂದನಗರ ಕಾಲನಿ ನಿವಾಸಿಗಳು ಹಾಗೂ ಮುಸ್ಲಿಂ ಸಮುದಾಯವರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಮಸೀದಿಯಲ್ಲಿದ್ದವರು ಹಿಂದುಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹನುಮಂತರಾಜು ಎಂಬುವರು ದೂರಿದ್ದಾರೆ.
ಪ್ರಮುಖ ಆರೋಪಿಗಳಾದ ಗ್ರಾಮದ ಜಬಿಉಲ್ಲಾ, ಶಕೀಲ್, ಷಹೀಲ್, ಫಜೀಲ್, ಉಸ್ಮಾನ್, ನಿಸಾರ್, ಯಾಸೀನ್, ಇಮ್ರಾನ್ ಸೇರಿ 29 ಮಂದಿ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಸ್ಪಿ ಭೇಟಿ
ಘರ್ಷಣೆ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸೌಹಾರ್ದತೆಯಿಂದ ಜೀವನ ನಡೆಸುವಂತೆ ಎರಡು ಸಮುದಾಯದವರಿಗೂ ತಿಳಿಹೇಳಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಡಿವೈಎಸ್ಪಿ ಮೋಹನ್ಕುಮಾರ್, ವೃತ್ತ ನಿರೀಕ್ಷಕ ಶಿವಣ್ಣ, ಎಸ್ಐ ಅಂಜನ್ಕುಮಾರ್ ಭದ್ರತೆ ನೇತೃತ್ವ ವಹಿಸಿದ್ದಾರೆ.