ವಿಷಾನಿಲ ಅವಘಡದ ಬಗ್ಗೆ ಈಗ ಹೇಳಿಕೆ ಬಿಡುಗಡೆ ಮಾಡಿದ ಎಲ್​​ಜಿ ಪಾಲಿಮರ್ಸ್​ ಕೆಮಿಕಲ್​ ಫ್ಯಾಕ್ಟರಿ..

LG Pharmacy 15 May 20
Published on

ವಿಶಾಖಪಟ್ಟಣ: ಇಂದು ಮುಂಜಾನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಆರ್​.ಆರ್​.ವೆಂಕಟಪುರಂನಲ್ಲಿರುವ ಎಲ್ ಜಿ ಪಾಲಿಮರ್ಸ್​ ಕೆಮಿಕಲ್​ ಫ್ಯಾಕ್ಟರಿಯಲ್ಲಿ ಸ್ಟೈರೀನ್ ಗ್ಯಾಸ್ ಸೋರಿಕೆಯಾಗಿ 9 ಜನರು ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಘಟನೆಗೆ ಸಂಬಂಧಪಟ್ಟಂತೆ ಎಲ್ಲ ವರದಿಯನ್ನೂ ಕೇಳಿದ್ದಾರೆ. ಆಂಧ್ರ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿಯವರೂ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಸಿದ್ದಾರೆ. ಅಲ್ಲಿ ಜನರ ರಕ್ಷಣಾ ಕಾರ್ಯ ನಡೆಯುತ್ತಿದ್ದರೂ, ಪರಿಸ್ಥಿತಿ ಭೀಕರವಾಗಿದೆ. ಪ್ರಾಣಿಗಳೂ ಸಹ ತಲೆ ಸುತ್ತಿ ಬಿದ್ದು, ಪ್ರಾಣ ಕಳೆದುಕೊಳ್ಳುತ್ತಿವೆ.

ಇಷ್ಟೆಲ್ಲ ಅವಾಂತರ ಆಗುತ್ತಿದ್ದರೂ ಮಧ್ಯಾಹ್ನದವರೆಗೂ ಒಂದು ಮಾತನಾಡದೆ ಇದ್ದ ಕೆಮಿಕಲ್​ ಎಲ್​ಜಿ ಪಾಲಿಮರ್ಸ್​ ಫ್ಯಾಕ್ಟರಿ ಇದೀಗ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ವಿಷ ಅನಿಲ ಸೋರಿಕೆಯಿಂದ ಅವಘಡ ನಡೆದಿದೆ. ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಸಿಕ್ಕಿದೆ. ಈ ಗ್ಯಾಸ್​ ಲೀಕ್​ನಿಂದಾಗಿ ಅಸ್ವಸ್ಥರಾಗಿರುವ ಎಲ್ಲರಿಗೂ ಶೀಘ್ರವೇ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುತ್ತಿದ್ದೇವೆ. ಹಾಗೇ ಸ್ಟೈರೀನ್ ಗ್ಯಾಸ್ ಸೋರಿಕೆಗೆ ಕಾರಣವೇನು ಎಂಬ ಬಗ್ಗೆ ಮತ್ತು ಇದರಿಂದಾದ ಸಾವು-ನೋವಿನ ಬಗ್ಗೆಯೂ ತನಿಖೆ ನಡೆಸುತ್ತೇವೆ ಎಂದು ಫ್ಯಾಕ್ಟರಿ ಹೇಳಿಕೆ ನೀಡಿದೆ.

ಇಂದು ಮುಂಜಾನೆ 3ಗಂಟೆಯ ನಂತರ ವಿಷ ಅನಿಲ ಸೋರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಒಮ್ಮೆಲೆ ವಿಷದ ಅನಿಲ ಬಿಡುಗಡೆಯಾಗಿದ್ದರಿಂದ ಸುತ್ತಮುತ್ತಲ ಇರುವ ಇಮ್ಹಾಚಲಂ, ಗೋಪಾಲಪಟ್ಟಣಂ, ವೆಪಗುಂಟ ಮತ್ತಿತರ ಹಳ್ಳಿಗಳ ಜನರು ಅಸ್ವಸ್ಥರಾಗಿದ್ದಾರೆ. ಎನ್​ಡಿಆರ್​ಎಫ್​ ಸೇರಿ ಹಲವು ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಸುತ್ತಲಿನ ಹಳ್ಳಿಗಳ ಜನರನ್ನು ಸ್ಥಳಾಂತರ ಮಾಡಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net