

ಸರಗೂರು: ಹನ್ನೆರಡನೇ ಶತಮಾನದಲ್ಲಿಯೇ ಶರಣ ಹಡಪದ ಅಪ್ಪಣ್ಣ ಅವರನ್ನು ನಿಜಸುಖಿ ಎಂದು ಬಸವಣ್ಣ ಕರೆಯುತ್ತಿದ್ದರು. ಅಪ್ಪಣ್ಣ ಅವರು ಅಂಗೈಯಲ್ಲಿ ಲಿಂಗ ಇಟ್ಟುಕೊಂಡು ಅದರಲ್ಲಿಯೇ ತಲ್ಲೀನರಾಗಿರುತ್ತಿದ್ದರು ಎಂದು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ವೈ.ಡಿ.ರಾಜಣ್ಣ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಮೋಳಿಗೆಯ ಮಾರಯ್ಯ, ಮೇದಾರ ಕೇತಯ್ಯ, ಸಮಗಾರ ಹರಳಯ್ಯ, ಸೊನ್ನಲಗದ ಸಿದ್ದರಾಮ ಸೇರಿದಂತೆ ಜಗತ್ತಿನ ಎಲ್ಲ ಧರ್ಮದ ಶರಣರಿಗೆ ಬಸವಣ್ಣನವರು 12ನೇ ಶತಮಾನದ ಅನುಭವ ಮಂಟಪದಲ್ಲಿ ಅವಕಾಶ ಕಲ್ಪಿಸಿದ್ದರು ಎಂದರು.
ಸವಿತಾ ಸಮಾಜದ ತಾಲೂಕು ಅಧ್ಯಕ್ಷ ನರಸಿಂಹ ಮಾತನಾಡಿ, ತಾಲೂಕು ಅಧಿಕಾರಿಗಳು ಹಾಗೂ ಶಾಸಕರು ನಮ್ಮ ಸಮಾಜವನ್ನು ಕಡೆಗಣಿಸುತ್ತಿದ್ದಾರೆ. ಐದು ಅವಧಿಯಲ್ಲಿ ಐದು ಶಾಸಕರನ್ನು ನೋಡಿಕೊಂಡು ಬರುತ್ತಿದ್ದೇವೆ. ಅದರೆ, ಸಮಾಜದ ಸಮುದಾಯದ ಭವನಕ್ಕೆ ಜಾಗ ನೀಡಲು ನಿರಾಕರಿಸುತ್ತಿದ್ದಾರೆ ಎಂದು ದೂರಿದರು.
ನಮ್ಮ ಸಮುದಾಯ ಚಿಕ್ಕದು ಎಂದುಕೊಂಡು ಎಷ್ಟೋ ಬಾರಿ ಶಾಸಕರಿಗೆ ಹಾಗೂ ಕಂದಾಯ ಹಾಗೂ ಪಪಂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಬೇರೆ ಬೇರೆ ಸಮಾಜದವರು ಹೆಚ್ಚಾಗಿ ಇದ್ದಾರೆ ಎಂದು ಅವರಿಗೆ ಜಾಗವನ್ನು ನೀಡುತ್ತಾರೆ. ನಮ್ಮ ಸಮಾಜ ಕಡಿಮೆ ಜನಸಂಖ್ಯೆಯಲ್ಲಿ ಇದ್ದೇವೆ ಎಂದು ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರಿ ಕಾಲೇಜಿನ ಉಪನ್ಯಾಸಕ ಹಾಲಪ್ಪ ಮಾತನಾಡಿ, ಈ ಸಮಾಜದಲ್ಲಿ ಬೆಳಗ್ಗೆ ಎದ್ದ ತಕ್ಷಣವೇ ಹಡಪದ ಅವರ ಮುಖ ನೋಡಬಾರದು ಎಂಬ ತಪ್ಪು ಕಲ್ಪನೆ ದೂರ ಮಾಡಲು ಬಸವಣ್ಣನವರು ಅಪ್ಪಣ್ಣ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ಮಾಡಿಕೊಳ್ಳುವ ಮೂಲಕ ತಮ್ಮನ್ನು ನೋಡಲು ಬರುವವರೆಲ್ಲರೂ ಮೊದಲು ಅಪ್ಪಣ್ಣ ಅವರನ್ನು ಭೇಟಿ ಮಾಡಿ ಬರುವಂತೆ ಮಾಡಿದ್ದರು ಎಂದು ಹೇಳಿದರು.
ಗ್ರೇಡ್-2 ತಹಸೀಲ್ದಾರ್ ಪರಶಿವಮೂರ್ತಿ, ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿದರು. ಸಮಾಜದ ಪಪಂ ಸದಸ್ಯರು ಚೆಲುವ ಕೃಷ್ಣ, ನೂರಳಸ್ವಾಮಿ, ಉಮಾ ರಾಮಚಂದ್ರ, ಚೈತ್ರ ಸ್ವಾಮಿ, ಟೌನ್ ಅಧ್ಯಕ್ಷ ಬಸವರಾಜು, ಗೌರವಾಧ್ಯಕ್ಷ ಶ್ರೀನಿವಾಸ, ಉಪಾಧ್ಯಕ್ಷರಾದ ರವಿ, ರಾಜು, ಮುಳ್ಳೂರು ರವಿ, ಪ್ರಧಾನ ಕಾರ್ಯದರ್ಶಿ ಪ್ರಭಾಕರ, ಖಜಾಂಚಿ ಕಾಳಶೆಟ್ಟಿ, ಯಜಮಾನರಾದ ಮುರಾರಿ, ಚಂದ್ರಶೇಖರ, ವೃಕ್ಷ ಕಮಿಟಿ ಸದಸ್ಯ ಸುಭಾನ್, ರಂಗಪ್ಪ, ರಂಗಶಟ್ಟಿ, ಗೋವಿಂದರಾಜ ಇತರರು ಹಾಜರಿದ್ದರು.