ಮನುಷ್ಯನನ್ನು ಪ್ರೀತಿಸುವುದೇ ನಿಜ ಧರ್ಮ

ಮನುಷ್ಯನನ್ನು ಪ್ರೀತಿಸುವುದೇ ನಿಜ ಧರ್ಮ
Published on

ಎಚ್.ಡಿ.ಕೋಟೆ: ಯಾರೂ ಮಾನವೀಯತೆಗೆ ವಿರುದ್ಧವಿರುವ ಗುಣಗಳನ್ನು ಬೆಳೆಸಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ, ಅಂಬೇಡ್ಕರ್ ಪ್ರತಿಮೆ ಅನಾವರಣ ಹಾಗೂ 2569ನೇ ಬುದ್ಧಪೂರ್ಣಿಮೆ, ಬುದ್ಧ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಧರ್ಮಕ್ಕಾಗಿ ನಾವಿಲ್ಲ, ನಮಗಾಗಿ ಧರ್ಮವಿದೆ, ದಯೆಯೇಧರ್ಮದ ಮೂಲ ಎಂಬಂತೆ ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ಧರ್ಮವಾಗಿದೆ. ಮಾನವತಾ ವಾದವಾಗಿದೆ ಎಂದರು.

ಆರ್ಥಿಕ ಮತ್ತು ಸಾಮಾಜಿಕ ಶಕ್ತಿಯನ್ನು ಬಲಪಡಿಸಿದಾಗ ಮಾತ್ರ ಜಾತಿ ವ್ಯವಸ್ಥೆ ತೊಡೆದುಹಾಕಲು ಸಾಧ್ಯ. ಇವನ್ಯಾರವ ಎಂದು ಕೇಳದೆ, ಇವ ನಮ್ಮವ ಎಂದಾಗ ಮಾತ್ರ ಜಾತಿ ದೂರವಾಗಲು ಸಾಧ್ಯ ಎಂದರು.

ವರ್ಗಕ್ಕೆ ಚಲನೆ ಇದೆ, ಶ್ರೀಮಂತ ಬಡವನಾಗಬಹುದು, ಬಡವ ಶ್ರೀಮಂತನೂ ಆಗಬಹುದು. ಆದರೆ, ಜಾತಿಗೆ ಚಲನೆ ಇಲ್ಲದ ಕಾರಣ ಜಾತಿ ವ್ಯವಸ್ಥೆ ತಾಂಡವವಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಾತಿ ಜನಗಣತಿ ಆರಂಭವಾಗಿದ್ದು ದಾಖಲೆಗಳನ್ನು ನೀಡುವ ಸಮಯದಲ್ಲಿ ಸರಿಯಾದ ಮಾಹಿತಿಯನ್ನು ನೀಡಬೇಕು, ಆಯಾ ಜಾತಿ ಮುಖಂಡರು ದಾರಿತಪ್ಪಿಸುವ ಕೆಲಸವನ್ನು ಮಾಡಬೇಡಿ ಎಂದರು.

ಶಾಸಕರಿಗೆ ತಲಾ 50 ಕೋಟಿ ರೂ.ಅನುದಾನವನ್ನು ಅಭಿವೃದ್ದಿ ಯೋಜನೆಗೆ ನೀಡಲು 8 ಸಾವಿರ ಕೋಟಿ ರೂ.ಮೀಸಲಿಡಲು ತೀರ್ಮಾನಿಸಲಾಗಿದೆ ಎಂದರು.

1,22,000 ಕುಟುಂಬಗಳಿಗೆ 52,009 ಕೋಟಿ ರೂ. ಅನುದಾನವನ್ನು ಕಳೆದ ಸಾಲಿನಲ್ಲಿ ವಿವಿಧ ಗ್ಯಾರಂಟಿಗಳಿಗೆ ನೀಡಲಾಗಿದೆ. 51,000 ಕ್ಯಾಪಿಟಲೈಜ್‌ಗೆ ಬಳಸಲಾಗಿದೆ. ಮುಂದಿನ ಸಾಲಿಗೆ 50,018 ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ನೀಡಲು ಕಾಯ್ದಿರಿಸಲಾಗಿದೆ. ಆದರೆ, ಬಿಜೆಪಿ ಅವರು ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿ ಆಗಿದೆ ಎಂದು ಜನಾಕ್ರೋಶ ಆಂದೋಲನ ಮಾಡುತ್ತಿದ್ದಾರೆ, ಜನರ ಆಕ್ರೋಶ ಇರುವುದು ಬಿಜೆಪಿ ಮೇಲೆ. ಆದರೆ, ಬಿಜೆಪಿಯವರು ಅದನ್ನು ನಮ್ಮ ಮೇಲೆ ತೋರಿಸುತ್ತಿದ್ದಾರೆ. 414 ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ಇಂದು 900 ರೂ.ಗೆ ಹೆಚ್ಚಾಗಿದೆ. ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಾಗಿದ್ದು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಂದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಕೊಟ್ಟು ಸರ್ಕಾರ ಪಾಪರ್ ಆಗಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಪಾಪರ್ ಆಗಿದ್ದರೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿತ್ತಾ ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುಂಚೆ ಚಿನ್ನದ ಬೆಲೆ 28 ಸಾವಿರ ರೂ.ಇತ್ತು. ಈಗ ಒಂದು ಲಕ್ಷ ರೂಪಾಯಿ ಆಗಿದೆ. ಇದರಿಂದ ಬಡವರು ಒಂದು ತಾಳಿ ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ಜನವಿರೋಧಿ ಆಡಳಿತ ಮಾಡುತ್ತಿರುವ ಬಿಜೆಪಿ, ಬೇರೆಯವರ ಮೇಲೆ ಗೂಬೆ ಕೂರಿಸುತ್ತಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಮಾತನಾಡಿ, ಭಾರತ ವೈವಿಧ್ಯಮಯವಾದ ದೇಶದಲ್ಲಿ ನಾವು ಒಗ್ಗಟ್ಟಾಗಿ ಇದ್ದೇವೆ ಎಂದರೆ ಇದಕ್ಕೆ ಸಂವಿಧಾನ ಕಾರಣ. ಮಾನವ ಹಕ್ಕುಗಳ ಪರವಾಗಿ ಅಂಬೇಡ್ಕರ್ ಇದ್ದರು, ದೇಶದ 120 ಕೋಟಿ ಜನರ ಪರವಾಗಿ ಸಂವಿಧಾನ ಇದೆ ಎಂದು ತಿಳಿಸಿದರು.

ಶಾಸಕ ಅನಿಲ್ ಕುಮಾರ್ ಮಾತನಾಡಿ, 149 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಸಂಸದರಾಗಿದ್ದ ಆರ್.ಧ್ರುವನಾರಾಯಣ ಅವರು ಶಿಕ್ಷಣ ಕ್ಷೇತ್ರಕ್ಕೆ ಒತ್ತನ್ನು ನೀಡುವುದರ ಮೂಲಕ ಹಲವು ಶಿಕ್ಷಣ ಸಂಸ್ಥೆಗಳನ್ನು ತಾಲೂಕಿನಲ್ಲಿ ಸ್ಥಾಪನೆ ಮಾಡಿದ್ದರು ಎಂದರು.

ತಂದೆ ಚಿಕ್ಕಮಾದು ಅವರು ಶಾಸಕರಾಗಿದ್ದಾಗ 1900 ಕೋಟಿ ರೂ. ಅನುದಾನವನ್ನು ತಂದು ತಾಲೂಕಿನ ಅಭಿವೃದ್ಧಿಗೆ ಕಾರಣರಾಗಿದ್ದರು. ತಂದೆಯಂತೆ ನಾನೂ ಕಳೆದ ಏಳು ವರ್ಷಗಳಿಂದ ಸಾವಿರಾರು ಕೋಟಿ ರೂ.ಗಳ ಹಣವನ್ನು ತಂದು ಅಭಿವೃದ್ಧಿಗೆ ಶ್ರಮಿಸಿರುವುದಾಗಿ ಹೇಳಿದರು.

ಮಾನಂದವಾಡಿಯಿಂದ ಮೈಸೂರಿನವರೆಗೆ ರಸ್ತೆ ಅಭಿವೃದ್ಧಿಗೆ 1300 ಕೋಟಿ ರೂ. ಅನುದಾನ ಮಂಜೂರು ಆಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.

ಎಚ್.ಡಿ. ಕೋಟೆ ಪಟ್ಟಣದ ಮುಖ್ಯರಸ್ತೆ ಹೆಬ್ಬಳ್ಳದಿಂದ ಹ್ಯಾಂಡ್ ಪೋಸ್ಟ್‌ವರೆಗೆ ಜೋಡಿ ರಸ್ತೆ ನಿರ್ಮಾಣ ಕಾಮಗಾರಿಗೆ ಅನುಮೋದನೆ ಮಾಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು.

ಸಚಿವ ಕೆ.ವೆಂಕಟೇಶ್, ಸತೀಶ್ ಜಾರಕಿಹೋಳಿ ಮಾತನಾಡಿದರು. ಗ್ಯಾರಂಟಿ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಸಂಸದ ಸುನೀಲ್ ಬೋಸ್, ಶಾಸಕರಾದ ರವಿಶಂಕರ್, ಗಣೇಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯ ಡಾ.ಟಿ.ತಿಮ್ಮಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್, ಜ್ಞಾನಪ್ರಕಾಶ್ ಸ್ವಾಮೀಜಿ, ಕೆ.ಮರಿಗೌಡ, ಪುರಸಭೆ ಅಧ್ಯಕ್ಷೆ ಶಿವಮ್ಮ, ಶಿವಣ್ಣ, ಎಚ್.ಸಿ.ನರಸಿಂಹಮೂರ್ತಿ, ಸರಗೂರು ಶಿವಣ್ಣ ಇದ್ದರು.

ಪಂಚ ಲೋಹದ ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಲ್ಲಿ 720 ಕೆ.ಜಿ ತೂಕದ ಪಂಚ ಲೋಹದ ಅಂಬೇಡ್ಕರ್‌ಪ್ರತಿಮೆಯನ್ನು ಉದ್ಘಾಟಿಸಿದರು. ಸಚಿವ ಡಾ.ಎಚ್.ಸಿ ಮಹಾದೇವಪ್ಪ, ಕೆ.ವೆಂಕಟೇಶ್, ಸತೀಶ್ ಜಾರಕಿಹೊಳಿ, ಶಾಸಕ ಅನಿಲ್ ಚಿಕ್ಕಮಾದು ಇತರ ಗಣ್ಯರು ಇದ್ದರು.

ಕಲಾತಂಡ ಮೆರವಣಿಗೆ: ಅಂಬೇಡ್ಕರ್ ಜಯಂತಿ ಅಂಗವಾಗಿ ಪಟ್ಟಣದ ಅಂಬೇಡ್ಕರ್ ಭವನದಿಂದ ನಾದ ಸ್ವರ, ನಂದಿಕಂಬ, ಡೊಳ್ಳು ಕುಣಿತ, ನಗಾರಿ, ಬೀಸು ಕಂಸಾಳೆ, ವೀರಗಾಸೆ, ಯಕ್ಷಗಾನದೊಂದಿಗೆ ಬೆಳ್ಳಿ ರಥದಲ್ಲಿ ಅಂಬೇಡ್ಕರ್ ಪ್ರತಿಮೆ ಇರಿಸಿ ಮಹಿಳೆಯರು ಕಳಸ ಹೊತ್ತು ಮೆರವಣಿಗೆ ಮೂಲಕ ಸಾಗಿದರು. ವಿವಿಧ ಗ್ರಾಮಗಳಿಂದ ಬಂದಿದ್ದ ಅಂಬೇಡ್ಕರ್ ಮತ್ತು ಬುದ್ಧ ಸ್ತಬ್ಧ ಚಿತ್ರಗಳು ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net