

ಎ.ಶಶಿಕುಮಾರ ಶಿಡ್ಲಘಟ್ಟ
ಸರ್ಕಾರಿ ಶಾಲೆಯೊಂದರ ಶೌಚಗೃಹ ಕಾಮಗಾರಿ ಆರಂಭವಾಗಿ ಎರಡು ವರ್ಷವಾದರೂ ಇದುವರೆಗೂ ಪೂರ್ಣಗೊಳಿಸಿ ಹಸ್ತಾಂತರಿಸದ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಶಾಲೆಯ ಬಾಲಕ, ಬಾಲಕಿಯರು ಹಾಗೂ ಶಿಕ್ಷಕಿಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ ಹಾಗೂ ನರೇಗಾ ಯೋಜನೆಯಡಿ ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ಬಾಲಕ, ಬಾಲಕಿಯರ ಹಾಗೂ ಅಂಗವಿಕಲಸ್ನೇಹಿ ಶೌಚಗೃಹ ನಿರ್ಮಿಸಲು 2021-22ನೇ ಸಾಲಿನಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ದುರಾದೃಷ್ಟವಶಾತ್ ಇದುವರೆಗೂ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸದ ಗುತ್ತಿಗೆದಾರ ಹಾಗೂ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಹಿರ್ದೆಸೆಗೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಶಾಲೆಯಲ್ಲಿ 9 ಹಾಗೂ 10ನೇ ತರಗತಿಯ ಸುಮಾರು 70 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಶೇ.50 ಹೆಣ್ಣು ಮಕ್ಕಳು ಹಾಗೂ ಮೂರ‌್ನಾಲ್ಕು ಶಿಕ್ಷಕಿಯರಿದ್ದಾರೆ. ಶೌಚಗೃಹ ಸಮಸ್ಯೆಯಿಂದಾಗಿ ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿರುವ ಹಳೆಯ ಶೌಚಗೃಹವನ್ನೇ ಬಳಸುವಂತಾಗಿದೆ.
ರಂಗಮಂದಿರ ಕಾಮಗಾರಿ ನನೆಗುದಿಗೆ
ಶಾಲಾ ಆವರಣದಲ್ಲಿ ಗ್ರಾಪಂ ನರೇಗಾ ಯೋಜನೆಯಡಿ ಗ್ರಾಮೀಣ ಉದ್ಯಾನವನ ಕಾಮಗಾರಿ ಹಾಗೂ ರಂಗಮಂದಿರ ನಿರ್ಮಾಣ ಮಾಡಲು ಎರಡು ವರ್ಷಗಳ ಹಿಂದೆಯೇ ಕಾಮಗಾರಿಯ ನಾಮಫಲಕ ಆಳವಡಿಸಲಾಗಿದೆ. ಆದರೂ ಇದುವರೆಗೆ ಕಟ್ಟಡ ಮೇಲೆ ಏಳಲೇ ಇಲ್ಲ. ಶಾಲಾ ಆವರಣದಲ್ಲಿ ರಂಗಮಂದಿರ ನಿರ್ಮಾಣ ಮಾಡಲು ಅಡಿಪಾಯ ಹಾಕಿರುವುದು ಬಿಟ್ಟರೆ ಇಡೀ ಕಾಮಗಾರಿ ನನೆಗುದಿಗೆ ಬಿದ್ದಿದೆ.
ಐದು ತಿಂಗಳ ಹಿಂದಷ್ಟೇ ಇಲ್ಲಿಗೆ ಬಂದಿದ್ದೇನೆ. ಈ ಹಿಂದೆ ಶಾಲೆಯಲ್ಲಿ ಏನು ನಡೆದಿದೆ ಎಂಬ ಬಗ್ಗೆ ಗೊತ್ತಿಲ್ಲ. ಶಾಲಾ ಆವರಣದಲ್ಲಿದ್ದ ಹಳೆಯ ಶೌಚಗೃಹ ಶಿಥಿಲಗೊಂಡಿದ್ದ ಕಾರಣ ನೂತನ ಶೌಚಗೃಹ ನಿರ್ಮಿಸುವಂತೆ ಮಾಡಿದ್ದ ಮನವಿಗೆ ಸ್ಪಂದಿಸಿ ಸುಮಾರು ಆರು ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಶೇ.90 ಮುಗಿದಿದೆ. ಉಳಿದ ಶೇ.10 ಕಾಮಗಾರಿ ಆದಷ್ಟು ಬೇಗ ಮುಗಿಸಿ ಹಸ್ತಾಂತರಿಸಿದರೆ ಶಾಲೆಯ ಮಕ್ಕಳಿಗೆ ಅನುಕೂಲವಾಗುತ್ತದೆ.
- ಮೊಯಿನಾ ಬೇಗಂ, ಮುಖ್ಯಶಿಕ್ಷಕಿ
ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಶೌಚಗೃಹ ಕಾಮಗಾರಿ ಅನುದಾನದ ಕೊರತೆಯಿಂದ ಮಂದಗತಿಯಲ್ಲಿ ಸಾಗಿದೆ. ಈ ಹಿಂದೆ ನರೇಗಾ ಯೋಜನೆಯಡಿ 90 ಸಾವಿರ ರೂ. ನೀಡಲಾಗಿತ್ತು. ಈಗ ಗ್ರಾಪಂನ ಇತರ ಅನುದಾನದಲ್ಲಿ ಹಣ ಹೊಂದಿಸಿ ಒಂದೆರಡು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಶೌಚಗೃಹಗಳನ್ನು ಶಾಲೆಗೆ ಹಸ್ತಾಂತರಿಸಲಾಗುವುದು.
- ಎ.ಶೈಲಾ, ಪಿಡಿಒ, ಮಳಮಾಚನಹಳ್ಳಿ ಗ್ರಾಪಂ