

ಮದ್ದೂರು: ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಸಮರ್ಥವಾಗಿ ಹೋರಾಟ ಮಾಡಲು, ರೈತಸಂಘ ಶಾಶ್ವತವಾಗಿ ಉಳಿಯುವ ಉದ್ದೇಶದಿಂದ ರೈತ ಸಂಘಗಳು ಒಂದಾಗುವ ಕಾಲ ಬಂದಿದೆ ಎಂದು ರೈತ ಸಂಘದ ಯುವ ಮುಖಂಡ ಪಚ್ಚೆ ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.
ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ಶುಕ್ರವಾರ ಪೊಲೀಸರ ಗುಂಡಿಗೆ ಬಲಿಯಾದ ರೈತ ಹುತಾತ್ಮರ 42ನೇ ವರ್ಷದ ಪುಣ್ಯಸ್ಮರಣೆ ಮತ್ತು ರೈತ ಚೈತನ್ಯ ಶಕ್ತಿಗಳಾಗಿದ್ದ ದಿ.ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ್, ಎಚ್.ಎಸ್.ರುದ್ರಪ್ಪ, ಕೆ.ಎಸ್.ಪುಟ್ಟಣ್ಣಯ್ಯ, ವಿ.ಅಶೋಕ್ ಹಾಗೂ ಕೋಣಸಾಲೆ ನರಸರಾಜು ಅವರ ಸವಿನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕ ರೈತ ಸಂಘ ಉದಯಿಸಿ 44 ವರ್ಷ ಕಳೆದಿದೆ. 44 ವರ್ಷಗಳ ಹೋರಾಟದಲ್ಲಿ ಸರ್ಕಾರ ವಿರುದ್ಧ ರೈತರು ಧ್ವನಿ ಎತ್ತಿ ಹೋರಾಟ ಮಾಡಿದ ಸಂದರ್ಭದಲ್ಲಿ ಸರ್ಕಾರದ ದೌರ್ಜನ್ಯಕ್ಕೆ ಸುಮಾರು 143 ಜನರು ಹುತಾತ್ಮರಾಗಿದ್ದಾರೆ ಎಂದು ಸ್ಮರಣಿಸಿದರು.
ರೈತರ ಹೋರಾಟದ ಫಲವಾಗಿ ಹಲವಾರು ನ್ಯಾಯಯುತ ಬೇಡಿಕೆಗಳು ಈಡೇರಿರುವ ಮೂಲಕ ರೈತರಿಗೆ ಅನುಕೂಲವಾಗಿದೆ. ಸರ್ಕಾರದ ವಿರುದ್ಧ ರೈತ ಸಂಘ ಧ್ವನಿ ಎತ್ತಿ ಹೋರಾಟ ಮಾಡಿದಾಗ ರೈತ ಸಂಘವನ್ನು ಹತ್ತಿಕ್ಕಲು ಮುಂದಾಗಿದ್ದ ಸರ್ಕಾರಗಳ ಧೋರಣೆ ಅಮಾನವೀಯ ಎಂದು ಸರ್ಕಾರಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ರಾಜ್ಯದ ರೈತರ ಹಿತ ದೃಷ್ಟಿಯಿಂದ ಪ್ರತಿಯೊಂದು ಹಳ್ಳಿಯಲ್ಲೂ ರೈತ ಸಂಘದ ಬಲವರ್ಧನೆಗೆ ಮುಂದಾಗಬೇಕು. ಗ್ರಾಮದಲ್ಲಿ ರೈತ ಸಂಘದ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಹಾಗೂ ಹಳೆಯದಾಗಿರುವ ನಾಮಫಲಗಳನ್ನು ತೆಗೆದು ಹೊಸದಾದ ನಾಮಫಲಕಗಳನ್ನು ಹಾಕುವ ಮೂಲಕ ರೈತ ಸಂಘಕ್ಕೆ ಹೊಸ ಚೈತನ್ಯ ತುಂಬಲು ಮುಂದಾಗಬೇಕೆಂದು ರೈತರಿಗೆ ಕಿವಿಮಾತು ಹೇಳಿದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ರೈತ ಸಂಘ ಬಲಿಷ್ಠವಾಗಬೇಕು. ವಿವಿಧ ರೈತ ಬಣಗಳನ್ನು ಒಟ್ಟುಗೂಡಿಸುವ (ಏಕೀಕರಣ) ಕೆಲಸವಾಗಬೇಕು ಹಾಗೂ ರೈತ ಸಂಘಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ನೋಂದಣಿ ಮಾಡಿಸಬೇಕು. ಮುಂದಿನ ವರ್ಷ ಬೆಸಗರಹಳ್ಳಿ ಗ್ರಾಮದಲ್ಲಿ 10 ಸಾವಿರ ರೈತರನ್ನು ಸೇರಿಸಿ ಹುತಾತ್ಮ ದಿನಾಚರಣೆ ಮಾಡಬೇಕು ಎಂದರು.
ರೈತರು ಒಗ್ಗಟ್ಟಾಗಿ ಹೋರಾಟ ಮಾಡಿದರೆ ಅದು ವಿಧಾನಸೌಧದಲ್ಲಿ ಚರ್ಚೆಯಾಗಿ ರೈತರ ಸಮಸ್ಯೆಗಳು ಬಗೆಹರಿಯಬೇಕು. ಆ ನಿಟ್ಟಿನಲ್ಲಿ ನಮ್ಮ ಹೋರಾಟ ಮಹತ್ವ ಪಡೆದುಕೊಳ್ಳಬೇಕು. ಆದ್ದರಿಂದ ಪ್ರತಿಯೊಬ್ಬರೂ ರೈತ ಸಂಘದ ಸಂಘಟನೆಗೆ ಹೆಚ್ಚಿನ ಶಕ್ತಿ ತುಂಬಬೇಕು ಎಂದರು.
ಭಾವಚಿತ್ರಕ್ಕೆ ಪುಷ್ಪನಮನ: ರೈತ ಹುತಾತ್ಮರ 42ನೇ ವರ್ಷದ ಪುಣ್ಯಸ್ಮರಣೆ ಮತ್ತು ರೈತ ಚೈತನ್ಯ ಶಕ್ತಿಗಳಾಗಿದ್ದ ದಿ.ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ್, ಎಚ್.ಎಸ್.ರುದ್ರಪ್ಪ, ಕೆ.ಎಸ್.ಪುಟ್ಟಣ್ಣಯ್ಯ, ವಿ.ಅಶೋಕ್ ಹಾಗೂ ಕೋಣಸಾಲೆ ನರಸರಾಜು ಅವರ ಸವಿನೆನಪು ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವಿಸಲಾಯಿತು.
ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಮನುಸೋಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷ ಚಂದ್ರಶೇಖರ್, ಮೈಸೂರು ಜಿಲ್ಲಾ ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್, ಗೌರವಾಧ್ಯಕ್ಷ ಬನ್ನೂರು ನಾರಾಯಣ್, ತುಮಕೂರು ಜಿಲ್ಲಾ ಅಧ್ಯಕ್ಷ ಯೋಗೇಶ್, ರಾಜ್ಯ ಉಪಾಧ್ಯಕ್ಷ ಯರಗನಹಳ್ಳಿ ರಾಮಕೃಷ್ಣಯ್ಯ, ಬೆಸಗರಹಳ್ಳಿ ವೃತ್ತ ಘಟಕದ ಅಧ್ಯಕ್ಷ ಪಣ್ಣೆದೊಡ್ಡಿ ವೆಂಕಟೇಶ್, ಗೌರವ ಅಧ್ಯಕ್ಷರಾದ ರಾಮಕೃಷ್ಣಯ್ಯ, ವೆಂಕಟಚಲಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಶಿವರಾಮು, ಚನ್ನಪ್ಪ, ಉಪಾಧ್ಯಕ್ಷರಾದ ಕೃಷ್ಣ, ರಾಜೇಶ್, ಲೋಕೇಶ್, ಮಧು, ಖಜಾಂಚಿ ಜಯರಾಮು, ಮುಖಂಡರಾದ ಮಂಜೇಶ್‌ಗೌಡ್ರು, ಪ್ರಭುಲಿಂಗು, ಸೊ.ಶಿ.ಪ್ರಕಾಶ್, ಕೀಳಘಟ್ಟ ನಂಜುಂಡಯ್ಯ, ಅಣ್ಣೂರು ಮಹೇಂದ್ರ, ಶಿವಲಿಂಗಯ್ಯ, ಕೆ.ಜಿ.ಉಮೇಶ್, ಲಿಂಗರಾಜು, ರಾಮಲಿಂಗಯ್ಯ, ಮೂಡ್ಯ ಚನ್ನೇಗೌಡ, ರಾಮಣ್ಣ, ರಾಮೇಗೌಡ, ಉಮೇಶ, ರಮೇಶ ಇದ್ದರು.