

ಹಾಸನ: ಹಿಂದಿಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರಿಕೆ ಮಾಡುತ್ತಿದ್ದಾರೆ. ತ್ರಿಭಾಷಾ ಸೂತ್ರ ನಮಗೆ ಒಗ್ಗುವುದಿಲ್ಲ. ಹಿಂದಿಯಿಂದ ನಮಗೆ ಏನು ಅನುಕೂಲ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಪ್ರಶ್ನಿಸಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕರವೇ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ದ್ವಿಭಾಷೆ ನೀತಿ ಮಾತ್ರ ಇದೆ. ನಾವು ಮೂರು ಭಾಷೆ ಒಪ್ಪಿಕೊಂಡಿದ್ದೇವೆ. ಯಾವ ರಾಜಕಾರಣಿಯೂ ದ್ವಿಭಾಷಾ ಸೂತ್ರಕ್ಕಾಗಿ ಹೋರಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೆಸರು ಉಳಿಯಬೇಕೆಂದರೆ ನಿಸ್ವಾರ್ಥ ಸೇವೆ, ಪ್ರಾಮಾಣಿಕ, ನಿಷ್ಠೆ, ಬದ್ಧತೆಯಿಂದ ಕೆಲಸ ಮಾಡಬೇಕು. ತ್ಯಾಗ, ಆದರ್ಶ ಇರುವ ಕಡೆ ಗೆಲುವು ಸಿಗುತ್ತದೆ. ಎಂಥ ಸುನಾಮಿ ಬಂದರೂ ಕರವೇ ಗಟ್ಟಿಯಾಗಿ ನಿಂತಿದೆ ಎಂದರೆ ಇದಕ್ಕೆ ಬದ್ಧತೆ, ನಿಸ್ವಾರ್ಥ ಸೇವೆ ಹಾಗೂ ತ್ಯಾಗ ಕಾರಣ ಎಂದರು.
ಕನ್ನಡ ಜಾತಿ, ಧರ್ಮ, ಕನ್ನಡವೇ ಎನ್ನುವ ಸಿದ್ಧಾಂತ ಎಂದು ಸಮಸ್ತ ಕನ್ನಡಿಗರನ್ನು ಒಂದು ವೇದಿಕೆಗೆ ಕರೆ ತಂದಿದ್ದು ಕರವೇ. ಜಾತಿ-ಧರ್ಮಗಳನ್ನು ಮೀರಿದ ಅದ್ಭುತ ಸಂಗಮ ಇದು. ಕನ್ನಡಿಗರು ಕೊಟ್ಟ ಅಭಿಮಾನ ದೊಡ್ಡದು. ನಮ್ಮ ಕಾರ್ಯಕರ್ತರು ಏನೇ ತೀರ್ಮಾನ ಕೈಗೊಂಡರೆ ತಾರ್ಕಿಕ ಅಂತ್ಯ ಕಾಣಿಸುತ್ತಾರೆ. ಪ್ರಚಾರ ಬಯಸಿ ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಬಗ್ಗೆ ರಾಜ್ಯದ ಜನರಿಗೆ ನಂಬಿಕೆಯಿಲ್ಲ. ಆದರೆ ಕರವೇ ಮೇಲೆ ಅಪಾರ ನಂಬಿಕೆಯಿದೆ. ರಾಜಕಾರಣಿಗಳಿಗೆ ಕನ್ನಡ ಬೇಡದಿರಬಹುದು. ನಮಗೆ ಪ್ರತಿ ಕ್ಷಣದ ಮಂತ್ರ ಕರ್ನಾಟಕ, ಕನ್ನಡ, ಕಾವೇರಿಯೇ ಆಗಿದೆ. ಅಖಂಡ ಕರ್ನಾಟಕವನ್ನು ಸಮೃದ್ಧವಾಗಿ ಕಟ್ಟಬೇಕೆಂಬ ಪ್ರತಿಜ್ಞೆ ನಮಗಿದೆ. ಕನ್ನಡಿಗರು ಒಪ್ಪಿಕೊಂಡಿದ್ದಾರೆ. ಆ ನಂಬಿಕೆ ಉಳಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಅದನ್ನು ಧಾರೆ ಎರೆಯಬೇಕು ಎಂಬುದು ನಮ್ಮ ಆಶಯ ಎಂದರು.
ಕನ್ನಡಕ್ಕಾಗಿ ಕೆಲಸ ಜೈಲಿಗೆ ಹೋದ ಒಬ್ಬ ಶಾಸಕನೂ ಇಲ್ಲ. ಯಾರಾದರೂ ಜೈಲಿಗೆ ಹೋಗಿದ್ದೀರಾ? ಕನ್ನಡಕ್ಕಾಗಿ ನಾವು ಜೈಲಿಗೆ ಹೋಗಿದ್ದೇವೆ. ಕರ್ನಾಟಕವನ್ನು ಮಾರ್ವಾಡಿ, ಗುಜರಾತಿ, ರೆಡ್ಡಿಗಳ ಕೈಗೆ ಕೊಡಲ್ಲ. ನೀವು ನಮ್ಮ ನಾಡಿಗೆ ಬಂದಿದ್ದೀರಿ. ಇಲ್ಲಿ ಬದುಕಿ ಅತಿಥಿಗಳಾಗಿ. ಇಲ್ಲಿ ಕುಳಿತಿರುವ ಎಲ್ಲರೂ ಮಾಲೀಕರಾಗಬೇಕು. ನೀವೂ ಅವರಂತೆ ವ್ಯಾಪಾರ ಮಾಡುವಂತಾಗಬೇಕು. ಅವರು ಮಾಲ್ ಕಟ್ತಾರೆ, ನಾವು ಅದನ್ನು ನೋಡಿ ಮರುಗಿದರೆ ತಪ್ಪು ನಮ್ಮದೇ ಹೊರತು ಅವರದ್ದಲ್ಲ. ನೆಲದ ಎಲ್ಲ ವ್ಯಾಪಾರ, ವ್ಯವಹಾರ ಕನ್ನಡಿಗರಿಗೆ ಸಿಗಬೇಕೆಂದರೆ ಒಟ್ಟಾಗರಬೇಕು. ಇಲ್ಲದಿದ್ದರೆ ಮುಂದೊಂದು ದಿನ ಪರಕೀಯರಂತೆ ಬದುಕ ಬೇಕಾಗುತ್ತದೆ ಎಂದು ಎಚ್ಚರಿಸಿ, ಅದಕ್ಕಾಗಿ 27 ವರ್ಷದಿಂದ ಹೋರಾಡುತ್ತಿದ್ದೇವೆ ಎಂದರು.
ಸಮಾಜ ಸೇವಕ, ಉದ್ಯಮಿ ಲಕ್ಷ್ಮಿಕಾಂತ್(ಕಂಚಮಾರನಹಲ್ಳಿ ಕಾಂತಣ್ಣ), ರಾಜ್ಯ ಕಾರ್ಯದರ್ಶಿ ಆಸಾಹರಿಯಾತ್, ಜಿಲ್ಲಾಧ್ಯಕ್ಷ ಸಿ.ಡಿ.ಮನುಕುಮಾರ್, ಜಿಲ್ಲಾ ಉಪಾಧ್ಯಕ್ಷ ಸೀತಾರಾಂ, ಪದಾಧಿಕಾರಿಗಳಾದ ಕುಮಾರ್, ರಾಜೇಂದ್ರ, ತಾಲೂಕು ಅಧ್ಯಕ್ಷರು ಇದ್ದರು.
ಯುವಕರಿಗೆ ಅಪ್ಪಟ ಕನ್ನಡದ ದೀಕ್ಷೆ: ರಾಜ್ಯದ 31 ಜಿಲ್ಲೆಗಳ ಯುವಕರಿಗೆ ನಾಡು, ನುಡಿ, ಜಲ, ಸಂಸ್ಕೃತಿ ಹೀಗೆ ಅಪ್ಪಟ ಕನ್ನಡದ ದೀಕ್ಷೆ ಕೊಡಬೇಕು ಎಂದು ನಾವು ತೀರ್ಮಾನ ಮಾಡಿದ್ದು, ರಾಜ್ಯದ ಎಲ್ಲ ತಾಲೂಕು, ಹೋಬಳಿಯಲ್ಲೂ ಚಾಲನೆ ಮಾಡುತ್ತೇವೆ ಎಂದು ನಾರಾಯಣ ಗೌಡ ಹೇಳಿದರು.
ಕನ್ನಡ ನಾಡೊಂದೇ ಎಂಬ ಸಂದೇಶವನ್ನು ಯುವಕರಿಗೆ ತಲುಪಿಸಬೇಕು. ರಾಜಕೀಯ ಪಕ್ಷಗಳಿಗೆ ಹೋಗಿ ಕನ್ನಡ ಕಳಕಳಿ ಇಲ್ಲದವರಿಗೆ ಕನ್ನಡದ ಅಭಿಮಾನ ತುಂಬಲು ಕನ್ನಡ ದೀಕ್ಷೆ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನನ್ನ ತವರು ಜಿಲ್ಲೆಯಿಂದಲೇ ಇಂದಿನಿಂದ ಆರಂಭಿಸುತ್ತಿದ್ದೇವೆ ಎಂದರು.
ಎಲ್ಲ ನಾಮಫಲಕಗಳಲ್ಲಿ ಶೇ.60 ಕನ್ನಡ ಇರಬೇಕು ಎಂಬ ನಮ್ಮ ಹೋರಾಟಕ್ಕೆ ಶೇ.70 ರಷ್ಟು ಫಲ ಸಿಕ್ಕಿದೆ. ಮುಂದಿನ ನವೆಂಬರ್ ಒಳಗೆ ಶೇ.100 ರಷ್ಟು ಆಗುವ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಧರ್ಮಸ್ಥಳ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಮಾತನಾಡಿದರೆ ತಪ್ಪಾಗಲಿದೆ. ತನಿಖೆ ಪ್ರಾಮಾಣಿಕವಾಗಿ ನಡೆದರೆ ಪಾಪ, ಕರ್ಮ ಮಾಡಿದವರು ಅನುಭವಿಸುತ್ತಾರೆ. ಅಂಥವರನು ್ನಮಂಜುನಾಥ ಕ್ಷಮಿಸಲ್ಲ ಎಂದರು.