ಗುರು-ಶಿಷ್ಯರ ಬಾಂಧವ್ಯ ಸಡಿಲ

19 mlv 1
ಮಳವಳ್ಳಿ ತಾಲೂಕಿನ ಬೆಳಕವಾಡಿ ಸಾರ್ವಜನಿಕ ಪ್ರೌಢಶಾಲೆಯಲ್ಲಿ ಮಂಗಳವಾರ ಹಳೇ ನೆನಪುಗಳು ಹೊಸ ಸಂಭ್ರಮ ನಮ್ಮ ಈ ಸ್ನೇಹ ಸಮ್ಮಿಲನ ಎಂಬ ಶೀರ್ಷಿಕೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳಿಂದ ತಮಗೆ ಅಕ್ಷರ ಕಲಿಸಿದ ಶಿಕ್ಷಕರನ್ನು ಗೌರವಿಸಿ ಸಂಭ್ರಮಿಸಿದರು.
Published on

ಮಳವಳ್ಳಿ: ಗುರು- ಶಿಷ್ಯರ ಬಾಂಧವ್ಯದ ಗಟ್ಟಿತನ ಸಡಿಲವಾಗುತ್ತಿರುವ ಕಾಲಘಟ್ಟದಲ್ಲಿ ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ ಗುರುವಂದನಾ ಸಮಾರಂಭ ಹಮ್ಮಿಕೊಂಡಿರುವುದು ತುಂಬ ಶ್ಲಾಘನೀಯ ಎಂದು ನಿವೃತ್ತ ಮುಖ್ಯ ಶಿಕ್ಷಕ ವಿ.ಕೇಶವಮೂರ್ತಿ ಹೇಳಿದರು.

ತಾಲೂಕಿನ ಬೆಳಕವಾಡಿ ಸಾರ್ವಜನಿಕ ಪ್ರೌಢಶಾಲೆಯಲ್ಲಿ 2006 - 07ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಮಂಗಳವಾರ ಹಮ್ಮಿಕೊಂಡಿದ್ದ ‘ಹಳೇ ನೆನಪುಗಳು ಹೊಸ ಸಂಭ್ರಮ ನಮ್ಮ ಈ ಸ್ನೇಹ ಸಮ್ಮಿಲನ’ ಎಂಬ ಶೀರ್ಷಿಕೆ ಅಡಿಯಲ್ಲಿ ಗುರುವಂದನಾ ಮತ್ತು ಸ್ಮಾರ್ಟ್ ಕ್ಲಾಸ್ ಯೋಜನೆಯ ಉದ್ಘಾಟನೆ ಸಮಾರಂಭವನ್ನು ಕುರಿತು ಮಾತನಾಡಿದರು. ಇಂದಿನ ಯುವ ಪೀಳಿಗೆಯಲ್ಲಿ ಗುರು ಹಿರಿಯರಿಯರನ್ನು ಗೌರವಿಸುವುದು ಕಡಿಮೆಯಾಗುತ್ತಿದ್ದು , ಶಿಕ್ಷಣವೂ ಸೇರಿದಂತೆ ಎಲ್ಲವೂ ಹಣದಲ್ಲಿ ಖರೀದಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಪ್ರವೃತ್ತಿ ದೇಶದ ಏಳಿಗೆಗೆ ಆತಂಕಕಾರಿ ಬೆಳವಣಿಗೆಯಾಗಿದೆ. ನಡೆನುಡಿಗಳಲ್ಲಿ ಗೌರವ ಮನೋಭಾವಗಳನ್ನು ರೂಢಿಸಿಕೊಳ್ಳುವುದು, ಗುರುವನ್ನು ನೆನೆಯುವುದು ನಮ್ಮ ಭಾರತೀಯ ಸಂಸ್ಕೃತಿಯಾಗಿದೆ ಎಂದ ಅವರು, ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕಿದೆ. ಗುರುವಂದನೆ ನೆಪದಲ್ಲಿ ಶಿಕ್ಷಕರು ಮತ್ತು ಹಳೆಯ ವಿದ್ಯಾರ್ಥಿಗಳನ್ನು ಮತ್ತೆ ನೋಡುವ ಅವಕಾಶ ಸಿಕ್ಕಿರುವುದು ಬಹಳ ಸಂತಸ ತಂದಿದೆ ಎಂದರು.

ಸರಿ ಸುಮಾರು ಹದಿನೆಂಟು ವರ್ಷಗಳ ಬಳಿಕ ಒಂದೆಡೆ ಸೇರಿ ಚದುರಿ ಹೋಗಿದ್ದ ನೆನಪುಗಳನ್ನು ಒಂದುಗೂಡಿಸುವುದರ ಜತೆಗೆ ತಮಗೆ ವಿದ್ಯೆ ಕಲಿಸಿದ ಗುರುಗಳು ತಾವು ಆಡಿಬೆಳೆದ ಶಾಲೆಯ ಸುಂದರತಾಣ ಹಾಗೂ ಸಹಪಾಠಿಗಳೊಂದಿಗೆ ಹಂಚಿಕೊಂಡ ಖುಷಿಯ ಕ್ಷಣಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮುಖ್ಯ ಶಿಕ್ಷಕ ದೇವರಾಜು ಹಾಗೂ ಸಹ ಶಿಕ್ಷಕರು ಮತ್ತು ನಿವೃತ್ತ ಶಿಕ್ಷಕರಾದ ಸಿ.ಮಹದೇವಸ್ವಾಮಿ, ಎಂ.ಮುನಿಯಪ್ಪ, ನಿರ್ಮಲಾ ಕುಮಾರಿ, ಟಿ.ಸುನಂದಾ ಸೇರಿದಂತೆ ಶಿಕ್ಷಕರು, ಆಡಳಿತ ಮಂಡಳಿ ಮತ್ತು ಹಳೆಯ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net