

ಯಳಂದೂರು: ತಾಲೂಕಿನಾದ್ಯಂತ ಜನವನ, ಒಬ್ಬರಿಗೊಂದು ಮರ ಅಭಿಯಾನ ಕಾರ್ಯಕ್ರಮದಡಿಯಲ್ಲಿ ತಾಲೂಕಿನಾದ್ಯಂತ ಈ ಸಾಲಿನಲ್ಲಿ 10 ಸಾವಿರ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಎಸ್. ನಿಂಗರಾಜು ಮಾಹಿತಿ ನೀಡಿದರು.
ಬುಧವಾರ ಪಟ್ಟಣದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ನಿಮಿತ್ತ ಗಿಡನೆಟ್ಟು ಮಾತನಾಡಿ, ಏರುತ್ತಿರುವ ತಾಪಮಾನವನ್ನು ನಿಯಂತ್ರಿಸಲು ರಾಜ್ಯಾದ್ಯಂತ ಜನವನ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದರ ನಿಮಿತ್ತ ನಮ್ಮ ಇಲಾಖೆ ವತಿಯಿಂದ ರಸ್ತೆಬದಿ, ಸರ್ಕಾರಿ ಕಚೇರಿ, ಶಾಲಾ, ಕಾಲೇಜು ಆವರಣ, ಸ್ಮಶಾನ ಸೇರಿದಂತೆ ಇತರ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಇಲಾಖೆಯ ವತಿಯಿಂದಲೇ ಪೋಷಣೆ ಮಾಡುವ ಯೋಜನೆ ಹೊಂದಲಾಗಿದೆ. ಇದರೊಂದಿಗೆ ಸಾರ್ವಜನಿಕರೂ ಸ್ವಯಂಪ್ರೇರಿತವಾಗಿ ಗಿಡನೆಟ್ಟು, ಪೋಷಿಸಿ ಮುಂದಿನ ಪೀಳಿಗೆಗೆ ಉತ್ತಮ ಕೊಡುಗೆ ನೀಡುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಿವಿಲ್ ನ್ಯಾಯಾಧೀಶ ಈಶ್ವರ್, ಸಿವಿಲ್ ನ್ಯಾಯಾಧೀಶ ಎಂ.ಆಕರ್ಷ್, ಬಿಆರ್‌ಟಿ ಎಸಿಎಫ್ ನಂದಗೋಪಾಲ್, ಅರಣ್ಯ ರಕ್ಷಕರಾದ ರಂಗಸ್ವಾಮಿ, ನಾಗರಾಜು, ಕೃಷ್ಣ, ನಾಗರಾಜು, ಗೋವಿಂದರಾಜು, ಮಲ್ಲಿಕಾರ್ಜುನಸ್ವಾಮಿ, ನಾಗೇಂದ್ರ, ಮಹದೇವಸ್ವಾಮಿ ಮತ್ತಿತರರು ಹಾಜರಿದ್ದರು.