

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಜಾನಪದ ಕ್ಷೇತ್ರಕ್ಕೆ ಉಪ್ಪಿನಕುದ್ರು ಗೊಂಬೆಯಾಟ ತಂಡದ ಕೊಡುಗೆ ಅಪಾರ. ಇಂದು 6ನೇ ತಲಾಂತರದಲ್ಲಿ ನಡೆಯುತ್ತಿರುವ ಈ ಕಲೆಯನ್ನು ನಾವೆಲ್ಲರೂ ಸೇರಿ ಉಳಿಸಬೇಕು ಎಂದು ಡಾ.ಹರಿಕೃಷ್ಣ ಪುನರೂರು ಹೇಳಿದರು.
ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಭಾನುವಾರ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ 10ನೇ ವಾರ್ಷಿಕೋತ್ಸವ ಹಾಗೂ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ-2025 ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಲ್.ಸಾಮಗ ಅವರು ಸಮಾರಂಭ ಹಾಗೂ ನಿವೃತ್ತ ಕೆನರಾ ಬ್ಯಾಂಕ್ ಅಧಿಕಾರಿ ವಿಲಾಸಿನಿ ಬಾಬುರಾಯ ಶೆಣೈ ಉಡುಪಿ ಅವರು ಪಾಕಶಾಲೆ ಉದ್ಘಾಟಿಸಿದರು. ಅಕಾಡೆಮಿ ಕೊಡಮಾಡುವ ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿಯನ್ನು ಕಲಾವಿದ ಓಂ ಗಣೇಶ್ ಉಪ್ಪುಂದ ಅವರಿಗೆ ಪ್ರದಾನ ಮಾಡಲಾಯಿತು.
ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ಮೊಕ್ತೇಸರ ರಾಧಾಕೃಷ್ಣ ಶೆಣೈ, ತಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೊಕ್ತೇಸರ ವಸಂತ ಆರ್.ಹೆಗ್ಡೆ, ಶಿವಮೊಗ್ಗ ಉದ್ಯಮಿ ಭಾಸ್ಕರ್ ಜಿ.ಕಾಮತ್, ಗಂಗೊಳ್ಳಿ ಎಸ್.ವಿ. ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸುಜಯೀಂದ್ರ ಹಂದೆ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭ ಪ್ರತೀಕ್ಷಾ ಕಾಮತ್ ಅವರು ದೀಕ್ಷಾ ಹಾಗೂ ಸಹನಾ ಶ್ರೀಲತಾ ನಾಯಕ್ ಮುಂಬೈ ಅವರು ಸಮೀಕ್ಷಾ ಅವರಿಗೆ ಶಾಲಾ ಸಾಮಗ್ರಿ ಕೊಡುಗೆಯಾಗಿ ನೀಡಿದರು. ಉಪ್ಪಿನಕುದ್ರು ನಿವಾಸಿ ವಾಸುದೇವ ಆಚಾರ್ ಅವರಿಗೆ ಜಿ.ಜಯಂತಿ ಗಣಪತಿ ಸೇರುಗಾರ್ ಗಂಗೊಳ್ಳಿ ವೈದ್ಯಕೀಯ ನೆರವು ನೀಡಿದರು. ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಏರ್ಪಡಿಸಿದ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹಮಾನ ವಿತರಿಸಲಾಯಿತು.
ಹಾಲ್ಮಕ್ಕಿ ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ ಗಂಗೊಳ್ಳಿ ವಿಷ್ಣು ಸಹಸ್ರನಾಮದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗಂಗೊಳ್ಳಿ ಡಾ.ಕಾಶೀನಾಥ್ ಪೈ ಪ್ರಾರ್ಥಿಸಿದರು. ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಪ್ರಾಸ್ತಾವಿಕ ಮಾತನಾಡಿದರು. ರಾಜೇಂದ್ರ ಪೈ ಪ್ರಶಸ್ತಿ ಪತ್ರ ವಾಚಿಸಿದರು. ನಿವೃತ್ತ ಶಿಕ್ಷಕ ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಶಿಕ್ಷಕ ಉದಯ ಭಂಡಾರ್ಕಾರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಧಾರ್ಮಿಕ ಕ್ಷೇತ್ರದ ಧುರೀಣ ವಸಂತ ಆರ್.ಹೆಗ್ಡೆ, ಹಿಂದುಸ್ತಾನಿ ಸಂಗೀತದಲ್ಲಿ ವಿದ್ವಾನ್ ಪದವಿ ಗಳಿಸಿದ ವಿದ್ವಾನ್ ಡಾ.ಎಚ್.ಆರ್.ಹೆಬ್ಬಾರ್, ರಾಜ್ಯಮಟ್ಟದ ಪವರ್ ಲಿಫ್ಟಿಂಗ್ನಲ್ಲಿ ಚಿನ್ನದ ಪದಕ ಗಳಿಸಿದ ಶಿಶಿರ ಶಂಕರ ಪೂಜಾರಿ ಹಾಗೂ ಬಾಲ ಚಿತ್ರ ಕಲಾವಿದ ವಿವೇಕ್ ಭಟ್ ಅವರನ್ನು ಸನ್ಮಾನಿಸಲಾಯಿತು. ರಾಜಶ್ರೀ ಆರ್.ಪೈ ಮತ್ತು ಎಂ.ರತ್ನಾಕರ ಪೈ ಅವರು ಶ್ರೀ ಗಣೇಶ ಯಕ್ಷಗಾನ ಮಂಡಳಿ, ಉಪ್ಪಿನಕುದ್ರು ಚೆಂಡೆಗಾರ ಶಂಕರ ಕುಮಾರ ಮೊಗವೀರ ಅವರಿಗೆ ಗೃಹ ನಿರ್ಮಾಣಕ್ಕೆ ಧನಸಹಾಯ ವಿತರಿಸಿದರು.