

ರಾಮನಗರ: ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡ ವಿರೋಧಿಗಳಾಗಿವೆ. ರಾಜ್ಯದಲ್ಲಿ ಕನ್ನಡಕ್ಕೆ ಸ್ಥಾನವಿಲ್ಲದಂತಾಗಿದೆ ಎಂದು ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ತಿಳಿಸಿದರು.
ರಾಮನಗರದ ಐಜೂರು ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ 4,600 ಶಾಲೆಗಳಲ್ಲಿ ಇಂಗ್ಲಿಷ್ ಕಲಿಸಲು ಹೊರಟು ಆರು ಸಾವಿರ ಕನ್ನಡ ಶಾಲೆಗಳನ್ನು ಕಡೆಗಣಿಸಿದೆ. ರಾಜ್ಯದಲ್ಲಿ ಇರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡ ವಿರೋಧಿಗಳು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಉರ್ದು ಶಾಲೆಗಳಲ್ಲಿ ಕನ್ನಡ ಶಿಕ್ಷಕರು ಇಲ್ಲ. ಕನ್ನಡ ಮಾಧ್ಯಮಕ್ಕಾಗಿ ಕನ್ನಡಿಗರ ಉಳಿವಿಗಾಗಿ ಹೋರಾಟ ಮಾಡುತ್ತೇವೆ ಎಂದರು.
ಕನ್ನಡ ಮಾಧ್ಯಮಕ್ಕಾಗಿ, ಕನ್ನಡಿಗರ ಬೇಡಿಕೆಗಾಗಿ ಕನ್ನಡಪರ ಸಂಟನೆಗಳು ಸೇರಿ ಕರ್ನಾಟಕ ಬಂದ್ ಕರೆಯಬೇಕಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಬದುಕಿದ್ದು ಸತ್ತಂತಿದೆ. ಪದೇಪದೆ ಸಿದ್ದರಾಮಯ್ಯ ಪರ ಮಾತನಾಡುತ್ತೇನೆಂಬ ಭಾವನೆ ಇರಬಹುದು. ಆದರೆ, ಸಿದ್ದರಾಮಯ್ಯ ಕರ್ನಾಟಕದಲ್ಲಿ ಒಬ್ಬ ಮುತ್ಸದ್ದಿ, ಹಿರಿಯ ವ್ಯಕ್ತಿಯಾಗಿದ್ದಾರೆ ಎಂದರು.
ಇವತ್ತಿನ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ರಾಜ್ಯಕ್ಕೆ ಅನಿರ್ವಾಯ ಎಂದು ಸಿಎಂ ಸಿದ್ದರಾಮಯ್ಯ ಪರ ವಾಟಾಳ್ ಮಾತನಾಡಿದರು. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಮೀರಿಸುವ ವ್ಯಕ್ತಿತ್ವ ಯಾರು ಇಲ್ಲ. ಎಐಸಿಸಿ ಏನಾದರೂ ದುಡುಕಿ ತಪ್ಪು ಹೆಜ್ಜೆ ಇಟ್ಟರೇ ಇಡೀ ರಾಜ್ಯಕ್ಕೆ ಅಪಮಾನ ಆಗುತ್ತದೆ. ಅಗೌರವ ಆಗುತ್ತದೆ. ಸಿದ್ದರಾಮಯ್ಯ ಇರುವವರೆಗೂ ಅಧಿಕಾರದಲ್ಲಿ ಇರಲಿ ಎಂದರು.
ಸಿದ್ದರಾಮಯ್ಯ ಇವತ್ತಿನ ಪರಿಸ್ಥಿತಿಯಲ್ಲಿ ಹೊರಟುತನ ಬಿಟ್ಟಿದ್ದಾರೆ, ಕೇಂದ್ರದವರೂ ಪಿತೂರಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ರಾಷ್ಟ್ರೀಯ ಅಧ್ಯಕ್ಷರು ಅಂತಾ ಮಾಡಿ ಮೂಲೆಗುಂಪು ಮಾಡಿ ಕೂರಿಸುವ ಕೆಲಸ ನಡೆಯುತ್ತಿದೆ. ಮುಖ್ಯಮಂತ್ರಿಯಾಗೇ ಇದ್ದುಕೊಂಡು ಒಬಿಸಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ. ಸಿದ್ದರಾಮಯ್ಯ ಅವರನ್ನು ಕಳೆದುಕೊಳ್ಳುವುದು ಅಪರಾಧ ಮಾಡಿದಂತೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನಲ್ಲೂ ಭ್ರಷ್ಟರು ಇದ್ದಾರೆ. ಜೈಲಿಗೆ ಹೋಗಬೇಕಾದವರೂ ಪಾರ್ಟಿಯಲ್ಲಿ ಇದ್ದಾರೆ ಎಂದು ಮಾತಿನಲ್ಲೇ ಮೂರು ಪಕ್ಷಗಳ ವಿರುದ್ಧ ಹರಿಯಾಯ್ದರು.
ಕರುನಾಡ ಸೇನಾ ರಾಜ್ಯ ಉಪಾಧ್ಯಕ್ಷ ಐಜೂರು ಎಂ.ಜಗದೀಶ್, ಮುಖಂಡರಾದ ಸಿ.ಎಸ್. ಜಯಕುಮಾರ್, ಯತೀಶ್, ಗಂಗಾಧರ್ ವಿ.ಎನ್, ಕೆ.ಜಯರಾಮ, ಪಿ.ಸುರೇಶ್ ಮಂಜುನಾಥ್, ಕೃಷ್ಣಮೂರ್ತಿ, ಭಾಗ್ಯಸುಧಾ, ಕುಮಾರ್, ಪ್ರಸನ್ನ, ಹೇಮಾವತಿ, ಮಹೇಂದ್ರಮ್ಮ, ಪಾರ್ಥಸಾರಥಿ, ಗಿರೀಶ್ಗೌಡ, ನಾರಾಯಣಸ್ವಾಮಿ, ಮಹದೇವಯ್ಯ ಮತ್ತಿತರರು ಇದ್ದರು.